ನಾನು ಬೇಗನೆ ನಿವೃತ್ತಿಯಾಗಲು ಟೀಮ್ ಮ್ಯಾನೇಜ್‌ಮೆಂಟ್ ಕಾರಣ: ಆಮಿರ್
ಕರಾಚಿ ಡಿ.20: ತನ್ನ 28ನೇ ವಯಸ್ಸಿನಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಪಾಕಿಸ್ತಾನದ ಟೀಮ್ ಮ್ಯಾನೇಜ್‌ಮೆಂಟ್ ಹೊಣೆಯಾಗಿದೆ. ಮುಖ್ಯ ಕೋಚ್ ಮಿಸ್ಬಾವುಲ್ ಹಕ್ ಹಾಗೂ ಬೌಲಿಂಗ್ ಕೋಚ್ ವಕಾರ್ ಯೂನಿಸ್ ನನ್ನ ಘನತೆಯನ್ನು ಹಾಳುಗೆಡವಿದರು ಎಂದು ವೇಗದ ಬೌಲರ್ ಮುಹಮ್ಮದ್ ಆಮಿರ್ ಆರೋಪಿಸಿದ್ದಾರೆ.
ತನ್ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡಿದ ಎಡಗೈ ವೇಗಿ ಆಮಿರ್, "ನಾನು ಟೆಸ್ಟ್ ಕ್ರಿಕೆಟ್ ಆಡಲು ಬಯಸುತ್ತಿಲ್ಲ. ಹಣ ಗಳಿಸಲು ಟ್ವೆಂಟಿ-20 ಲೀಗ್‌ನಲ್ಲಿ ಆಡುತ್ತೇನೆ ಎಂದು ಮಿಸ್ಬಾ ಹಾಗೂ ಯೂನಿಸ್ ಹೇಳುವ ಮೂಲಕ ಜನರಲ್ಲಿ ನನ್ನ ಬಗ್ಗೆ ಕೆಟ್ಟ ಭಾವನೆ ಮೂಡಿಸಲು ಯತ್ನಿಸಿದ್ದರು. ಇವರಿಬ್ಬರು ನನ್ನ ಗೌರವಕ್ಕೆ ಧಕ್ಕೆ ತಂದರು. ಗೌರವ ಉಳಿಸಲು ಎಲ್ಲರೂ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ನಿವೃತ್ತಿ ನಿರ್ಧಾರ ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ನಾನು ಈ ವಿಚಾರವನ್ನು ಎತ್ತಬೇಕೆಂದು ಈ ನಿರ್ಧಾರ ತೆಗೆದುಕೊಂಡೆ. ತಂಡದಲ್ಲಿ ಏನು ನಡೆಯುತ್ತಿದೆ ಎಂದು ಜನರಿಗೂ ತಿಳಿಯಬೇಕಾಗಿದೆ'' ಎಂದರು.
"ನಾನು ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಆಡಲು ಸಜ್ಜಾಗಿದ್ದೆ. ನಾನು ಉತ್ತಮ ಫಾರ್ಮ್‌ನಲ್ಲಿದ್ದ ಹೊರತಾಗಿಯೂ ಈಗಿನ ತಂಡದ ಆಡಳಿತವು ನನ್ನನ್ನು ಆಯ್ಕೆ ಮಾಡದೆ ನಿರ್ಲಕ್ಷಿಸಿತು. ನ್ಯೂಝಿಲ್ಯಾಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದ್ದ 35 ಆಟಗಾರರಲ್ಲಿ ನನ್ನನ್ನು ಆಯ್ಕೆ ಮಾಡದಿರುವುದು ನನಗೆ ಬೇಸರ ತಂದಿತು'' ಎಂದರು.