ಬಾಕ್ಸಿಂಗ್ ಡೇ ಟೆಸ್ಟ್ ಗೆ ಶುಭಮನ್, ರಾಹುಲ್, ರಿಷಭ್ ಸಜ್ಜು
ಹೊಸದಿಲ್ಲಿ: ಅಡಿಲೇಡ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯದ ಬೌಲಿಂಗ್ ದಾಳಿ ಎದುರಿಸಲಾಗದೆ ಕಂಗಾಲಾಗಿದ್ದ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ಮಾಡುವ ನಿರೀಕ್ಷೆಯಿದೆ. ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಹಾಗೂ ಯುವ ಆರಂಭಿಕ ಆಟಗಾರ ಪೃಥ್ವಿ ಶಾ 4 ಪಂದ್ಯಗಳ ಸರಣಿಯ ಉಳಿದ ಪಂದ್ಯ ಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.
ಹಿರಿಯ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಸಿಡ್ನಿಯಲ್ಲಿ ನಡೆಯುವ ಮೂರನೇ ಟೆಸ್ಟ್ ತನಕ ಲಭ್ಯವಿರದ ಹಿನ್ನೆಲೆಯಲ್ಲಿ ಅಭ್ಯಾಸ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಯುವ ಬ್ಯಾಟ್ಸ್ ಮನ್ ಶುಭಮನ್ ಗಿಲ್ ಅವರು ಶಾ ಅವರ ಸ್ಥಾನ ತುಂಬುವ ಹುಮ್ಮಸ್ಸಿನಲ್ಲಿದ್ದಾರೆ.
ಸಹಾ ಅವರ ಬ್ಯಾಟಿಂಗ್ ಕೂಡ ಟೀಮ್ ಮ್ಯಾನೇಜ್‌ಮೆಂಟ್‌ಗೆ ವಿಶ್ವಾಸ ಮೂಡಿಸಿಲ್ಲ. ಈ ಹಿಂದಿನ ಆಸ್ಟ್ರೇಲಿಯ ಪ್ರವಾಸದಲ್ಲಿ ಶತಕ ಸಿಡಿಸಿದ್ದ ದಿಲ್ಲಿ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರತ್ತ ಟೀಮ್ ಮ್ಯಾನೇಜ್‌ಮೆಂಟ್ ಚಿತ್ತಹರಿಸುವ ಸಾಧ್ಯತೆಯಿದೆ.
ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿ ಹಾಗೂ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ಮಣಿಕಟ್ಟಿಗೆ ಗಾಯ ವಾಗಿರುವುದರಿಂದ ಕೆ.ಎಲ್.ರಾಹುಲ್ ಹಾಗೂ ಮುಹಮ್ಮದ್ ಸಿರಾಜ್ ಆಡುವ 11ರ ಬಳಗಕ್ಕೆ ಪ್ರವೇಶಿಸಲು ಎದುರು ನೋಡುತ್ತಿದ್ದಾರೆ.
36ರ ಹರೆಯದ ಸಹಾ ನಿವೃತ್ತಿ ಅಂಚಿನಲ್ಲಿದ್ದು, ತಂಡದ ಆಡಳಿತವು ಪಂತ್‌ರನ್ನು ಮುಂದಿನ 3 ಪಂದ್ಯಗಳಿಗೆ ಆಯ್ಕೆ ಮಾಡಬಹುದು. ಪಂತ್ ಉತ್ತಮ ಪ್ರದರ್ಶನ ನೀಡಿದರೆ ಇಂಗ್ಲೆಂಡ್ ವಿರುದ್ಧ ಸರಣಿಗೂ ಅವಕಾಶ ಪಡೆಯಬಹುದು.
‘‘ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ದಂತಹ ಸ್ಥಳಗಳಲ್ಲಿ ರಿಷಭ್ ಪಂತ್ ಮೊದಲ ಆಯ್ಕೆ ಯಾಗಿದ್ದಾರೆಂಬ ನಮ್ಮ ಸಮಿತಿಯ ನಿರ್ಧಾರ ಸ್ಪಷ್ಟವಾಗಿದೆ ಎನ್ನುವುದು ಈಗ ಸಾಬೀತಾಗಿದೆ. ಮುಂದಿನ 3 ಟೆಸ್ಟ್ ಗಳಲ್ಲಿ ಪಂತ್‌ಗೆ ಅವಕಾಶ ನೀಡಿದರೆ ಅದನ್ನು ನಾನು ಒಪ್ಪುತ್ತೇನೆ’’ ಎಂದು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್ ಹೇಳಿದ್ದಾರೆ.
ಮುಂಬೈಯ 21ರ ಹರೆಯದ ಶಾ ಅಂದು ಕೊಂಡಿದ್ದೆಲ್ಲವೂ ಆಗುತ್ತಿಲ್ಲ. ಅವರ ತಂತ್ರಗಾರಿಕೆ, ಪಂದ್ಯದಲ್ಲಿ ಅವರ ಒಟ್ಟಾರೆ ವರ್ತನೆಯ ಕುರಿತು ಗಂಭೀರ ಪ್ರಶ್ನೆ ಎದ್ದಿವೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಹನುಮ ವಿಹಾರಿಯನ್ನು ಅಗ್ರ ಕ್ರಮಾಂಕದಲ್ಲಿ ಆಡಿಸಬೇಕೆಂಬ ಮಾತು ಕೇಳಿಬರುತ್ತಿದೆ. ವಿಹಾರಿಯನ್ನು 5ನೇ ಕ್ರಮಾಂಕದಲ್ಲಿ ಆಡಿಸುವುದು ಉತ್ತಮ ಯೋಚನೆಯಾ ಗಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಭಾರತದ ಪರ ಆರು ಬಾರಿ ಐದು ವಿಕೆಟ್ ಗೊಂಚಲನ್ನು ಪಡೆದಿರುವ ಮುಹಮ್ಮದ್ ಸಿರಾಜ್ ಎಂಸಿಜಿಯಲ್ಲಿ ಶಮಿ ಸ್ಥಾನ ತುಂಬುವ ಮೂಲಕ ಚೊಚ್ಚಲ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ಆದರೆ, ಸಿರಾಜ್ ಹಾಗೂ ನವದೀಪ್ ಸೈನಿ ನಡುವೆ ಪೈಪೋಟಿ ಏರ್ಪಟ್ಟಿದೆ. ಎರಡು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಿರಾಜ್ ಅವರತ್ತ ಹೆಚ್ಚು ಒಲವು ವ್ಯಕ್ತವಾಗಿದೆ.