ಐಸಿಸಿ ಟೆಸ್ಟ್ ರ‍್ಯಾಂಕಿಂಗ್ : ಅಗ್ರಸ್ಥಾನಿ ಸ್ಟೀವ್ ಸ್ಮಿತ್ ಜೊತೆ ಕೊಹ್ಲಿ ಸ್ಪರ್ಧೆ

Update: 2020-12-20 19:06 GMT

ದುಬೈ; ಆಸ್ಟ್ರೇಲಿಯ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಹೀನಾಯವಾಗಿ ಸೋಲುಂಡಿದ್ದರೂ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಆಸೀಸ್‌ನ ಅಗ್ರಮಾನ್ಯ ಟೆಸ್ಟ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್‌ಗೆ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 74 ರನ್ ಗಳಿಸಿದ್ದ ಕೊಹ್ಲಿ ಎರಡು ಅಂಕವನ್ನು ಗಳಿಸಿದ್ದಾರೆ. ಈ ಮೂಲಕ ಒಟ್ಟು 888 ಪಾಯಿಂಟ್ಸ್ ಸಂಪಾದಿಸಿದ್ದಾರೆ. ಭಾರತ ವಿರುದ್ಧ ಎರಡು ಇನಿಂಗ್ಸ್‌ಗಳಲ್ಲಿ ಒಟ್ಟು 2 ರನ್ ಗಳಿಸಿದ್ದ ಸ್ಮಿತ್(911)10 ಅಂಕವನ್ನು ಕಳೆದುಕೊಂಡಿದ್ದಾರೆ.

47 ಹಾಗೂ 6 ರನ್ ಗಳಿಸಿದ್ದ ಲ್ಯಾಬುಶೇನ್ ಜೀವನಶ್ರೇಷ್ಠ 839 ಅಂಕ ಗಳಿಸಿದ್ದಾರೆ. ಔಟಾಗದೆ 73 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ಆಸ್ಟ್ರೇಲಿಯದ ನಾಯಕ ಟಿಮ್ ಪೈನ್ ಒಟ್ಟು 592 ಅಂಕದೊಂದಿಗೆ ಜೀವನಶ್ರೇಷ್ಠ 33ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಪೈನ್ 2018ರ ಡಿಸೆಂಬರ್‌ನಲ್ಲಿ 45ನೇ ಸ್ಥಾನದಲ್ಲಿದ್ದರು. ಔಟಾಗದೆ 51 ರನ್ ಗಳಿಸಿದ್ದ ಜೋ ಬರ್ನ್ಸ್ 48ನೇ ಸ್ಥಾನಕ್ಕೇರಿದ್ದು, 2016ರ ಬಳಿಕ ಮೊದಲ ಬಾರಿ ಅಗ್ರ-50ರಲ್ಲಿ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಸ್ಪಿನ್ನರ್ ಆರ್.ಅಶ್ವಿನ್ ಭಾರತದ ಅಗ್ರ ರ್ಯಾಂಕಿನ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆಸ್ಟ್ರೇಲಿಯದ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದರು. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾರನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೇರಿದ್ದಾರೆ.

ಅಡಿಲೇಡ್ ಟೆಸ್ಟ್‌ನಲ್ಲಿ ಆಡದ ರವೀಂದ್ರ ಜಡೇಜ ಆಲ್‌ರೌಂಡರ್‌ಗಳ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. 7 ವಿಕೆಟ್ ಗೊಂಚಲು ಪಡೆದಿದ್ದ ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಆರು ಅಂಕ ಗಳಿಸಿದ್ದಾರೆ. ಕಮಿನ್ಸ್ ಸಹ ಆಟಗಾರ ಜೋಶ್ ಹೇಝಲ್‌ವುಡ್ ಭಾರತ ವಿರುದ್ಧ 2ನೇ ಇನಿಂಗ್ಸ್‌ನಲ್ಲಿ ಅಮೋಘ ಬೌಲಿಂಗ್(5/8)ಮಾಡಿದ್ದ ಕಾರಣ ನಾಲ್ಕು ಸ್ಥಾನ ಭಡ್ತಿ ಪಡೆದು 805 ಅಂಕ ಗಳಿಸಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News