×
Ad

ಇರಾಕ್: ಅಮೆರಿಕ ರಾಯಭಾರ ಕಚೇರಿ ಮೇಲೆ ರಾಕೆಟ್ ದಾಳಿ

Update: 2020-12-21 23:40 IST

ಬಗ್ದಾದ್ (ಇರಾಕ್), ಡಿ. 21: ಅಮೆರಿಕದ ದಾಳಿಯಲ್ಲಿ ಹತರಾದ ಇರಾನ್‌ನ ಸೇನಾಧಿಕಾರಿ ಖಾಸಿಮ್ ಸುಲೈಮಾನಿಯ ಮೊದಲ ವಾರ್ಷಿಕ ಪುಣ್ಯತಿಥಿ ಸಮೀಪಿಸುತ್ತಿರುವಂತೆಯೇ, ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ರವಿವಾರ ಸರಣಿ ರಾಕೆಟ್ ದಾಳಿಗಳನ್ನು ನಡೆಸಲಾಗಿದೆ.

ರವಿವಾರ ರಾತ್ರಿ ಕನಿಷ್ಠ ಐದು ರಾಕೆಟ್‌ಗಳು ಅಮೆರಿಕ ರಾಯಭಾರ ಕಚೇರಿಯ ಸಮೀಪ ಪತನಗೊಂಡು ಸ್ಫೋಟಿಸಿವೆ ಎಂದು ಎಎಫ್‌ಪಿ ವರದಿಗಾರರು ವರದಿ ಮಾಡಿದ್ದಾರೆ.

ತಕ್ಷಣ, ಅಮೆರಿಕ ರಾಯಭಾರ ಕಚೇರಿಯಲ್ಲಿರುವ ಸಿ-ರ್ಯಾಮ್ ರಾಕೆಟ್ ನಿಗ್ರಹ ವ್ಯವಸ್ಥೆಯು ಜಾಗೃತಗೊಂಡು ರಾಕೆಟ್‌ಗಳ ವಿರುದ್ಧ ಪ್ರತಿ ದಾಳಿ ನಡೆಸಿದೆ.

ದಾಳಿಯಿಂದಾಗಿ ಸೊತ್ತುಗಳಿಗೆ ಹಾನಿಯಾಗಿವೆ, ಆದರೆ, ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಇರಾಕ್ ಭದ್ರತಾ ಪಡೆಗಳು ಬಳಿಕ ಹೇಳಿಕೆಯೊಂದರಲ್ಲಿ ತಿಳಿಸಿವೆ.

ಅತಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಮೀಪದಲ್ಲಿ ಕನಿಷ್ಠ ಮೂರು ರಾಕೆಟ್‌ಗಳು ಪತನಗೊಂಡಿವೆ ಹಾಗೂ ಇನ್ನೆರಡು ರಾಕೆಟ್‌ಗಳು ಇನ್ನೊಂದು ಜನನಿವಾಸ ಪ್ರದೇಶದ ಮೇಲೆ ಬಿದ್ದಿವೆ ಎಂದು ಭದ್ರತಾ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಕಳೆದ ವರ್ಷದ ಜನವರಿ 3ರಂದು ಬಗ್ದಾದ್ ವಿಮಾನ ನಿಲ್ದಾಣದ ಸಮೀಪ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಸುಲೈಮಾನಿ ಮತ್ತು ಇರಾಕಿ ಅರೆಸೈನಿಕ ಪಡೆಯೊಂದರ ಮುಖ್ಯಸ್ಥ ಅಬು ಮಹದಿ ಅಲ್ ಮುಹಾಂದಿಸ್ ಮೃತಪಟ್ಟಿದ್ದಾರೆ.

ಇರಾನ್ ದಾಳಿಯನ್ನು ಎದುರಿಸಲು ಸಿದ್ಧ: ಅಮೆರಿಕ

ವಾಶಿಂಗ್ಟನ್, ಡಿ. 21: ಹತ ಇರಾನ್ ಸೇನಾಧಿಕಾರಿ ಖಾಸಿಮ್ ಸುಲೈಮಾನಿಯ ಪುಣ್ಯತಿಥಿಯ ಸಂದರ್ಭದಲ್ಲಿ ಇರಾನ್ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿದರೆ ಪ್ರತಿದಾಳಿ ನಡೆಸಲು ಸಿದ್ಧವಾಗಿರುವುದಾಗಿ ಅಮೆರಿಕ ರವಿವಾರ ಎಚ್ಚರಿಸಿದೆ.

‘‘ನಮ್ಮನ್ನು, ನಮ್ಮ ಸ್ನೇಹಿತರನ್ನು ಮತ್ತು ವಲಯದಲ್ಲಿರುವ ನಮ್ಮ ಭಾಗೀದಾರರನ್ನು ರಕ್ಷಿಸಲು ನಾವು ಸಿದ್ಧರಾಗಿದ್ದೇವೆ. ಅಗತ್ಯ ಬಿದ್ದರೆ ಪ್ರತಿಕ್ರಿಯಿಸಲು ನಾವು ತಯಾರಾಗಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್‌ನ ಮುಖ್ಯಸ್ಥ ಜನರಲ್ ಕೆನೆತ್ ಮೆಕೆಂಝಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News