ಅರುಣ್ ಜೇಟ್ಲಿ ಪ್ರತಿಮೆ ನಿರ್ಮಾಣ ವಿರೋಧಿಸಿ ಡಿಡಿಸಿಎಗೆ ರಾಜೀನಾಮೆ ನೀಡಿದ ಬಿಷನ್ ಸಿಂಗ್ ಬೇಡಿ
ಹೊಸದಿಲ್ಲಿ: ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ) ತನ್ನ ಮಾಜಿ ಅಧ್ಯಕ್ಷ ಅರುಣ್ ಜೇಟ್ಲಿ ಅವರ ಪ್ರತಿಮೆಯನ್ನು ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಡಿಡಿಸಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಪಿನ್ ದಂತಕತೆ ಬಿಷನ್ ಸಿಂಗ್ ಬೇಡಿ ಅವರು ಪ್ರೇಕ್ಷಕರ ಸ್ಟಾಂಡ್‌ವೊಂದಕ್ಕೆ 2017ರಲ್ಲಿ ಇಟ್ಟಿರುವ ತನ್ನ ಹೆಸರನ್ನು ತೆಗೆದುಹಾಕುವಂತೆ ದಿಲ್ಲಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ.
ಡಿಡಿಸಿಎ ಸಂಸ್ಕೃತಿಯನ್ನು ಖಂಡಿಸಿರುವ ಬೇಡಿ, ಇದು ಸ್ವಜನ ಪಕ್ಷಪಾತವನ್ನು ಉತ್ತೇಜಿಸುತ್ತದೆ ಹಾಗೂ ಕ್ರಿಕೆಟಿಗರಿಗಿಂತ ಆಡಳಿತಗಾರರಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರಲ್ಲದೆ ಕ್ರಿಕೆಟ್ ಮಂಡಳಿಯಲ್ಲಿ ತನ್ನ ಸದಸ್ಯತ್ವವನ್ನು ತ್ಯಜಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಸಚಿವರಾಗಿದ್ದ ಹಾಗೂ ಕಳೆದ ವರ್ಷ ಅನಾರೋಗ್ಯದಿಂದ ನಿಧನರಾಗಿರುವ ರಾಜಕಾರಣಿ ಅರುಣ್ ಜೇಟ್ಲಿಯವರ ಪುತ್ರ ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿಯನ್ನು ಉದ್ದೇಶಿಸಿ ಬೇಡಿ ಅವರು ಈ ಪತ್ರವನ್ನು ಒತ್ತಾಯಿಸಿದರು.
ಅಧ್ಯಕ್ಷರು ತಕ್ಷಣವೇ ಜಾರಿಗೆ ಬರುವಂತೆ ಸ್ಟೇಡಿಯಂ ಸ್ಟಾಂಡ್‌ನಲ್ಲಿರುವ ನನ್ನ ಹೆಸರನ್ನು ತೆಗೆದು ಹಾಕಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಅಲ್ಲದೆ ಈ ಮೂಲಕ ಡಿಡಿಸಿಎಯಲ್ಲಿರುವ ನನ್ನ ಸದಸ್ವತ್ವವನ್ನು ತ್ಯಜಿಸುತ್ತೇನೆ ಎಂದು ಬೇಡಿ ಪತ್ರದಲ್ಲಿ ಬರೆದಿದ್ದಾರೆ.
ಜೇಟ್ಲಿ 1999ರಿಂದ 2013ರ ತನಕ 14 ವರ್ಷಗಳ ಕಾಲ ಡಿಡಿಸಿಎ ಅಧ್ಯಕ್ಷರಾಗಿದ್ದರು. ಅವರ ಸ್ಮರಣೆಗಾಗಿ ಕೋಟ್ಲಾದಲ್ಲಿ ಆರು ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಡಿಡಿಸಿಎ ನಿರ್ಧರಿಸಿದೆ.
ಡಿಡಿಸಿಎ 2017ರಲ್ಲಿ ಮೊಹಿಂದರ್ ಅಮರನಾಥ್ ಜೊತೆಗೆ ಬೇಡಿ ಅವರ ಹೆಸರನ್ನು ಸ್ಟೇಡಿಯಂನ ಸ್ಟಾಂಡ್‌ವೊಂದಕ್ಕೆ ಇಟ್ಟಿತ್ತು.