ಬ್ಯಾಟಿಂಗ್‌ನಲ್ಲಿ ರಾಹುಲ್ ಸ್ಥಾನ ಸ್ಥಿರ, ಕೊಹ್ಲಿಗೆ 7ನೇ ಸ್ಥಾನ

Update: 2020-12-23 18:17 GMT

ಐಸಿಸಿ ಟ್ವೆಂಟಿ-20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನಕ್ಕೆ ಏರಿದ್ದಾರೆ.

ವಾಸ್ತವವಾಗಿ  ರಾಹುಲ್ ಮತ್ತು ಕೊಹ್ಲಿ ಇವರನ್ನು ಹೊರತುಪಡಿಸಿ ಬ್ಯಾಟ್ಸ್ ಮನ್, ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳ ವಿಭಾಗಗಳಲ್ಲಿ ಆಟಗಾರರ ಶ್ರೇಯಾಂಕದ ಅಗ್ರ -10 ಪಟ್ಟಿಯಲ್ಲಿ ಭಾರತದ ಯಾರಿಗೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

816 ಅಂಕಗಳೊಂದಿಗೆ ರಾಹುಲ್ ಈ ಪಟ್ಟಿಯಲ್ಲಿ ಡೇವಿಡ್ ಮಲನ್ (915) ಮತ್ತು ಬಾಬರ್ ಆಝಮ್ (820) ಹಿಂದೆ ಇದ್ದರೆ, ಕೊಹ್ಲಿ 697 ಅಂಕಗಳನ್ನು ಹೊಂದಿದ್ದಾರೆ.

ಎಲ್ಲಾ ಮೂರು ಸ್ವರೂಪಗಳಲ್ಲಿ ಕೊಹ್ಲಿ ಟಾಪ್ -10 ರೊಳಗೆ ಸ್ಥಾನ ಪಡೆದಿದ್ದಾರೆ. ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿ ಮತ್ತು ಟೆಸ್ಟ್ ಬಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ನ್ಯೂಝಿಲ್ಯಾಂಡ್‌ನ ಓಪನರ್ ಟಿಮ್ ಸೀಫರ್ಟ್ ಮತ್ತು ವೇಗದ ಬೌಲರ್ ಟಿಮ್ ಸೌಥಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ 2-1 ಗೆಲುವಿನ ಬಳಿಕ ವೃತ್ತಿಜೀವನದ ಅತ್ಯುತ್ತಮ ಸ್ಥಾನಗಳನ್ನು ಗಳಿಸಿದ್ದಾರೆ.

ತವರು ಸರಣಿಯಲ್ಲಿ ಉತ್ತಮ ರನ್ ಗಳಿಸಿದ ನಂತರ ಸೀಫರ್ಟ್ ವೃತ್ತಿಜೀವನದ ಅತ್ಯುತ್ತಮ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ. ಸೀಫರ್ಟ್ 176 ರನ್ ಗಳಿಸಿದ್ದರು. ಸೌಥಿ ಆರು ವಿಕೆಟ್‌ಗಳನ್ನು ಪಡೆದು ಏಳನೇ ಸ್ಥಾನಕ್ಕೆ ಏರಿದ್ದಾರೆ.

ಸೀಫರ್ಟ್ ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 63 ಎಸೆತಗಳಲ್ಲಿ ಔಟಾಗದೆ 84 ರನ್ ಗಳಿಸಿದ್ದ ಸೀಫರ್ಟ್ ಈ ವರ್ಷದ ಆಗಸ್ಟ್‌ನಲ್ಲಿ 32ನೇ ಶ್ರೇಯಾಂಕವನ್ನು ಹೊಂದಿದ್ದರು.

ಸೌಥಿ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. ಈ ಪೈಕಿ 4 ವಿಕೆಟ್‌ಗಳನ್ನು ಎರಡನೇ ಪಂದ್ಯದಲ್ಲಿ ಪಡೆದಿದ್ದರು. ಸೌಥಿ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಅಗ್ರ 10 ಸ್ಥಾನಗಳನ್ನು ಗಳಿಸಿದ್ದಾರೆ, ಟೆಸ್ಟ್‌ನಲ್ಲಿ ನಾಲ್ಕನೇ ಮತ್ತು ಏಕದಿನ ಪಂದ್ಯಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

 ಟ್ವೆಂಟಿ-20 ಬೌಲರ್ ಮತ್ತು ಆಲ್‌ರೌಂಡರ್‌ಗಳ ಅಗ್ರ ಶ್ರೇಯಾಂಕವನ್ನು ಕ್ರಮವಾಗಿ ಅಫ್ಘಾನಿಸ್ತಾನ ಜೋಡಿ ರಶೀದ್ ಖಾನ್ ಮತ್ತು ಮುಹಮ್ಮದ್ ನಬಿ ಪಡೆದಿದ್ದಾರೆ.

ಐಸಿಸಿ ಪುರುಷರ ಟ್ವೆಂಟಿ-20 ತಂಡ ಶ್ರೇಯಾಂಕದಲ್ಲಿ ಪಾಕಿಸ್ತಾನ ಮೂರು ಅಂಕಗಳನ್ನು ಕಳೆದುಕೊಂಡಿದೆ ಮತ್ತು ನ್ಯೂಝಿಲ್ಯಾಂಡ್ ಮೂರು ಅಂಕಗಳನ್ನು ಗಳಿಸಿದೆ. ಈ ಎರಡೂ ತಂಡಗಳು ಕ್ರಮವಾಗಿ ನಾಲ್ಕನೇ ಮತ್ತು ಆರನೇ ಸ್ಥಾನವನ್ನು ಉಳಿಸಿಕೊಂಡಿದೆ.

275 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯ (272) ಮತ್ತು ಭಾರತ (268) ನಂತರದ ಸ್ಥಾನದಲ್ಲಿವೆ.

ವಾರ್ನರ್ ಎರಡನೇ ಟೆಸ್ಟ್‌ಗೂ ಅಲಭ್ಯ

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡಿರುವ ಡೇವಿಡ್ ವಾರ್ನರ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ ಎರಡನೇ ಟೆಸ್ಟ್ ಪಂದ್ಯಕ್ಕೂ ಲಭ್ಯರಿಲ್ಲ.

 ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಡೇವಿಡ್ ವಾರ್ನರ್ ಮತ್ತು ಸೀನ್ ಅಬಾಟ್ ಮತ್ತೆ ಆಸ್ಟ್ರೇಲಿಯ ಟೆಸ್ಟ್ ತಂಡಕ್ಕೆ ಸೇರಲಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್‌ಗೆ ಹೆಚ್ಚುವರಿ ಆಟಗಾರರನ್ನು ಸೇರಿಸಿಕೊಳ್ಳದೆ ಮೊದಲ ಪಂದ್ಯದಲ್ಲಿ ಆಡಿರುವ ಆಟಗಾರರನ್ನೇ ಮುಂದುವರಿಸಲು ಆಸ್ಟ್ರೇಲಿಯ ತೀರ್ಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News