ಟಿಸಿಎಸ್ ವರ್ಲ್ಡ್ 10ಕೆ: 62 ನಿಮಿಷದಲ್ಲಿ 10 ಕಿ.ಮೀ. ಓಡಿದ ಐದು ತಿಂಗಳ ಗರ್ಭಿಣಿ
ಬೆಂಗಳೂರು, ಡಿ.24: 10 ಕಿ.ಮೀ.ರಸ್ತೆ ಓಟದ ಸ್ಪರ್ಧೆಯಾಗಿರುವ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು-2020ರಲ್ಲಿ ಕೇವಲ 62 ನಿಮಿಷದಲ್ಲಿ ಓಟವನ್ನು ಪೂರ್ಣಗೊಳಿಸಿರುವ ಐದು ತಿಂಗಳ ಗರ್ಭಿಣಿ ಎಲ್ಲರಿಗೂ ಸ್ಫೂರ್ತಿ ತುಂಬಿದ್ದಾರೆ.
ಅಂಕಿತಾ ಗೌರ್ ರವಿವಾರ ನಡೆದ ಟಿಸಿಎಸ್ ವರ್ಲ್ಡ್ 10ಕೆ ಓಟದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಂಕಿತಾ ನಿರಂತರವಾಗಿ ಕಳೆದ 9 ವರ್ಷಗಳಿಂದ ಓಟದಲ್ಲಿ ತೊಡಗಿಸಿಕೊಂಡಿದ್ದಾರೆ.
ನಾನು ಕಳೆದ 9 ವರ್ಷಗಳಿಂದ ಹೆಚ್ಚಿನೆಲ್ಲಾ ದಿನಗಳಲ್ಲಿ ಓಟದಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವೊಮ್ಮೆ ಗಾಯಗೊಂಡಾಗ ಅಥವಾ ಅನಾರೋಗ್ಯ ಕಾಡಿದಾಗ ವಿಶ್ರಾಂತಿ ಪಡೆದಿರುವ ನಿದರ್ಶನವಿದೆ. ಇದನ್ನು ಹೊರತುಪಡಿಸಿ 9 ವರ್ಷಗಳಿಂದ ನಿಯಮಿತವಾಗಿ ಓಡುತ್ತಿದ್ದೇನೆ. ಓಟ ನನ್ನ ಉಸಿರಿದ್ದಂತೆ. ಇದು ನನಗೆ ಸಹಜವಾಗಿ ಬರುತ್ತದೆ ಎಂದು ಗೌರ್ ಹೇಳಿದ್ದಾರೆ.
ಓಟ ನಿಜಕ್ಕೂ ತುಂಬಾ ಸುರಕ್ಷಿತ. ಗರ್ಭಾವಸ್ಥೆಯಲ್ಲಿ ಇದೊಂದು ಉತ್ತಮ ವ್ಯಾಯಾಮ. ಪ್ರತಿದಿನ 5-8 ಕಿ.ಮೀ. ನಿಧಾನವಾಗಿ ಓಡುವ ಮೂಲಕ ಈ ಸ್ಪರ್ಧೆಗೆ ನಾನು ತಯಾರಿ ನಡೆಸಿದ್ದೆ. ನಾನೀಗ 5 ತಿಂಗಳ ಗರ್ಭಿಣಿಯಾಗಿರುವ ಕಾರಣ ಓಟ ಹಾಗೂ ನಡಿಗೆಯ ವೇಳೆ ವಿಶ್ರಾಂತಿ ಪಡೆಯುವೆ. ನಾನು ಈ ಹಿಂದೆ ಟಿಸಿಎಸ್ 10 ಕೆ ಸ್ಪರ್ಧೆಯಲ್ಲಿ ಪದಕಗಳನ್ನು ಜಯಿಸಿದ್ದೆ. ಆದರೆ ಈ ಬಾರಿ ಗರ್ಭಿಣಿಯಾಗಿರುವ ಕಾರಣ ನನಗೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ನನ್ನ ನಿರ್ಧಾರಕ್ಕೆ ವೈದ್ಯರು, ಹೆತ್ತವರು ಹಾಗೂ ಪತಿಯ ಬೆಂಬಲ ಲಭಿಸಿತ್ತು ಎಂದು ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ, 2013ರಿಂದ ಟಿಸಿಎಸ್ ವರ್ಲ್ಡ್ 10ಕೆಯಲ್ಲಿ ಭಾಗವಹಿಸುತ್ತಿರುವ ಅಂಕಿತಾ ಗೌರ್ ಹೇಳಿದ್ದಾರೆ.
ಅಂಕಿತಾ ಅವರು ಬರ್ಲಿನ್ (ಮೂರು ಬಾರಿ), ಬೊಸ್ಟನ್ ಹಾಗೂ ನ್ಯೂಯಾರ್ಕ್ ಸಹಿತ ಐದಾರು ಅಂತರ್ ರಾಷ್ಟ್ರೀಯ ಮ್ಯಾರಥಾನ್ ನಲ್ಲಿಯೂ ಭಾಗವಹಿಸಿದ್ದಾರೆ.