“ನೀವಿದಕ್ಕೆ ಅರ್ಹರಿದ್ದೀರಿ”: ಮುಹಮ್ಮದ್ ಸಿರಾಜ್ ಗೆ ಟೆಸ್ಟ್ ಕ್ಯಾಪ್ ಕೊಟ್ಟು ಪ್ರತಿಕ್ರಿಯಿಸಿದ ಅಶ್ವಿನ್

Update: 2020-12-26 06:31 GMT

 ಮೆಲ್ಬೋರ್ನ್:ಆಸ್ಟ್ರೇಲಿಯ ವಿರುದ್ಧ ಎರಡನೇ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೆ ಮೊದಲು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಚೊಚ್ಚಲ ಪಂದ್ಯವನ್ನಾಡಿದ ವೇಗದ ಬೌಲರ್ ಮುಹಮ್ಮದ್ ಸಿರಾಜ್‌ಗೆ ಟೆಸ್ಟ್ ಕ್ಯಾಪ್ ನೀಡಿದ ಬಳಿಕ ಆಡಿರುವ ಕೆಲವೇ ಮಾತು ಸಿರಾಜ್ ಅವರ ವೃತ್ತಿಜೀವನದ ಪಯಣವನ್ನು ಕಟ್ಟಿಕೊಡಲು ಶಕ್ತವಾಯಿತು.

ದೇಶೀಯ ಕ್ರಿಕೆಟ್ ಹಾಗೂ ಭಾರತ ಎ ತಂಡದಲ್ಲಿ ಸಾಕಷ್ಟು ಶ್ರಮವಹಿಸಿರುವ ಸಿರಾಜ್ ಟೀಮ್ ಇಂಡಿಯಾದ ಪರ ಆಡುವ ಅರ್ಹತೆಯನ್ನು ಗಳಿಸಿದ್ದಾರೆ ಎಂದು ಶನಿವಾರ ಎಂಸಿಜಿಯಲ್ಲಿ ಹೈದರಾಬಾದ್ ವೇಗದ ಬೌಲರ್‌ಗೆ ಟೆಸ್ಟ್ ಕ್ಯಾಪ್ ನೀಡಿದ ಬಳಿಕ ಚೆನ್ನೈ ಸ್ಪಿನ್ನರ್ ಅಶ್ವಿನ್ ಹೇಳಿದರು.

ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಭಾರತ ಎ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ನೀವು ಟೆಸ್ಟ್ ಕ್ಯಾಪ್‌ನ್ನು ಪಡೆದಿದ್ದೀರಿ.ಈ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ನೀಡಬೇಕು ಎಂದು ಯುವ ಬೌಲರ್ ಸಿರಾಜ್‌ಗೆ ಟೆಸ್ಟ್ ಕ್ಯಾಪ್ ನೀಡುವ ಮೊದಲು ಅಶ್ವಿನ್ ಹೇಳಿದರು.

ಎರಡನೇ ಟೆಸ್ಟ್ ಆರಂಭಕ್ಕೆ ಮೊದಲು ಅಶ್ವಿನ್ ಅವರು ಸಿರಾಜ್‌ಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದಾಗ ಸಹ ಆಟಗಾರರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಅಡಿಲೇಡ್ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಪ್ಯಾಟ್ ಕಮಿನ್ಸ್ ಬೌನ್ಸರ್ ತಗಲಿ ಮುಹಮ್ಮದ್ ಶಮಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಿರಾಜ್‌ಗೆ ಎರಡನೇ ಪಂದ್ಯಲ್ಲಿ ಆಡುವ ಅವಕಾಶ ಲಭಿಸಿದೆ.

ಸಿರಾಜ್ ವೃತ್ತಿಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ರಣಜಿ ಟ್ರೋಫಿಯಲ್ಲಿ ಹೈದರಾಬಾದ್‌ನ ಪರ ಹಾಗೂ ಭಾರತ ಎ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡಿದ ಕಾರಣ ಸಿರಾಜ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯ ಪ್ರವಾಸದಲ್ಲಿದ್ದಾಗಲೇ ಸಿರಾಜ್ ತಂದೆ ನಿಧನರಾಗಿದ್ದರು. ಆದಾಗ್ಯೂ ಅವರು ಆಸ್ಟ್ರೇಲಿಯದಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News