ಅಭಿಮಾನಿ ಪೋಸ್ಟ್‌ ಮಾಡಿದ ವೀಡಿಯೋದಿಂದಾಗಿ ಐವರು ಭಾರತೀಯ ಕ್ರಿಕೆಟಿಗರು ಐಸೋಲೇಶನ್‌ ಗೆ!

Update: 2021-01-02 14:39 GMT

ಸಿಡ್ನಿ,ಜ.2: ಅಭಿಮಾನಿಯೋರ್ವರು ಪೋಸ್ಟ್‌ ಮಾಡಿದ ವೀಡಿಯೋದ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡಲು ತೆರಳಿದ್ದ ಭಾರತೀಯ ಕ್ರಿಕೆಟ್‌ ತಂಡದ ಐವರು ಆಟಗಾರರನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಐಸೋಲೇಶನ್‌ ಗೆ ಕಳುಹಿಸಿದ ಘಟನೆ ನಡೆದಿದೆ. ಮೂರನೇ ಟೆಸ್ಟ್‌ ಪಂದ್ಯಾಟದಲ್ಲಿ ರೋಹಿತ್‌ ಶರ್ಮಾ ಸೇರಿದಂತೆ ಐವರು ಆಟಗಾರರು ಭಾಗವಹಿಸುವ ಕುರಿತು ಅನುಮಾನಗಳಿವೆ ಎಂದು timesofindia.com ವರದಿ ಮಾಡಿದೆ.

‌ರಿಷಭ್‌ ಪಂತ್‌, ರೋಹಿತ್‌ ಶರ್ಮಾ, ಶುಭ್‌ ಮನ್‌ ಗಿಲ್, ನವದೀಪ್‌ ಸೈನಿ ಹಾಗೂ ಪೃಥ್ವಿ ಶಾ ಸದ್ಯ ಐಸೋಲೇಶನ್‌ ಗೆ ಒಳಗಾಗಿದ್ದಾರೆ. ಟ್ವಿಟರ್‌ ನಲ್ಲಿ ನವಲ್‌ ದೀಪ್‌ ಸಿಂಗ್‌ ಎಂಬ ವ್ಯಕ್ತಿಯು "ನನ್ನ ಪಕ್ಕದಲ್ಲಿ ರಿಷಭ್‌ ಪಂತ್‌, ರೋಹಿತ್‌ ಶರ್ಮಾ, ಶುಭ್‌ ಮನ್‌ ಗಿಲ್, ನವದೀಪ್‌ ಸೈನಿ ಹಾಗೂ ಪೃಥ್ವಿ ಶಾ ಇದ್ದಾರೆ. ನಾನು ಅವರಿಗೆ ತಿಳಿಯದಂತೆಯೇ ಅವರ ಬಿಲ್‌ ಅನ್ನು ಪಾವತಿ ಮಾಡಿದ್ದೇನೆ. ಚಾಂಪಿಯನ್‌ ಗಳಿಗಾಗಿ ನಾನು ಈ ಕಾರ್ಯ ಮಾಡಿದ್ದೇನೆ" ಎಂದು ಸರಣಿ ಟ್ವೀಟ್‌ ಗಳ ಮೂಲಕ ತಿಳಿಸಿದ್ದಾರೆ. ಮಾತ್ರವಲ್ಲದೇ ಫೋಟೊ ಹಾಗೂ ವೀಡಿಯೋವನ್ನೂ ಪ್ರಕಟಿಸಿದ್ದರು.

ಕೊರೋನ ಕಾರಣದಿಂದಾಗಿ ಆಟಗಾರರು ಯಾರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂಬ ನಿಯಮವಿತ್ತು. ಆದರೆ ಆಟಗಾರರು ಈ ನಿಯಮವನ್ನು ಉಲ್ಲಂಘಿಸಿ ಹೊಸ ವರ್ಷಾಚರಣೆ ಸಂದರ್ಭ ರೆಸ್ಟೋರೆಂಟ್‌ ಗೆ ತೆರಳಿದ್ದು ಈ ವೀಡಿಯೋ ಮುಖಾಂತರ ಬಹಿರಂಗವಾಗಿದೆ. ಬಳಿಕ ಈ ಐವರು ಆಟಗಾರರನ್ನು ಐಸೋಲೇಶನ್‌ (ಪ್ರತ್ಯೇಕತೆ)ಗೆ ಕಳುಹಿಸಲಾಗಿದ್ದು, ಮುಂದಿನ ಟೆಸ್ಟ್‌ ಪಂದ್ಯಾಟಕ್ಕೆ ಈ ಪ್ರಮುಖ ಆಟಗಾರರು ಲಭ್ಯವಾಗಲಿದ್ದಾರೆಯೇ ಅನ್ನುವ ಕುರಿತು ಅನುಮಾನಗಳು ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News