ಗಾಯಾಳುಗಳ ಪಟ್ಟಿಗೆ ರಾಹುಲ್ ಸೇರ್ಪಡೆ

Update: 2021-01-06 06:54 GMT

ಮೆಲ್ಬೊರ್ನ್, ಜ.5: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಅಭ್ಯಾಸದ ವೇಳೆ ಲೋಕೇಶ್ ರಾಹುಲ್ ಅವರ ಮಣಿಕಟ್ಟಿಗೆ ಗಾಯವಾಗಿದೆ.

ನೆಟ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾಗ ರಾಹುಲ್‌ರ ಎಡ ಮಣಿಕಟ್ಟಿಗೆ ಗಾಯವಾಗಿದೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

 ಬಾರ್ಡರ್-ಗವಾಸ್ಕರ್ ಟ್ರೋಫಿಯ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಭ್ಯವಿರುವುದಿಲ್ಲ. ಏಕೆಂದರೆ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತು ಪೂರ್ಣ ಶಕ್ತಿಯನ್ನು ಮರಳಿ ಪಡೆಯಲು ಸುಮಾರು ಮೂರು ವಾರಗಳ ಸಮಯ ಬೇಕಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

ಈಗಾಗಲೇ ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಗಾಯದ ಕಾರಣದಿಂದಾಗಿ ತಂಡದ ಸೇವೆಗೆ ಲಭ್ಯರಿಲ್ಲ. ವೇಗಿ ಇಶಾಂತ್ ಶರ್ಮಾ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿದ್ದರು. ಉಪನಾಯಕ ರೋಹಿತ್ ಶರ್ಮಾ ಕೂಡ ಗಾಯಗೊಂಡಿದ್ದರೂ, ಇದೀಗ ಚೇತರಿಸಿಕೊಂಡು ತಂಡದ ಸೇವೆಗೆ ಅಣಿಯಾಗಿದ್ದಾರೆ.

 ‘‘ರಾಹುಲ್‌ಈಗ ಭಾರತಕ್ಕೆ ಮರಳುತ್ತಾರೆ ಮತ್ತು ಅವರ ಗಾಯದ ಹೆಚ್ಚಿನ ಪುನರ್ವಸತಿಗಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ತೆರಳಲಿದ್ದಾರೆ ’’ ಎಂದು ಬಿಸಿಸಿಐ ತಿಳಿಸಿದೆ.

ಫೆಬ್ರವರಿ 5 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ತವರಿನ ಟೆಸ್ಟ್ ಸರಣಿಗೂ ರಾಹುಲ್ ತಂಡಕ್ಕೆ ವಾಪಸಾಗುವ ಸಾಧ್ಯತೆ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News