ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಸಿರಾಜ್, ಸಮಾಧಾನಪಡಿಸಿದ ಬುಮ್ರಾ

Update: 2021-01-07 13:48 GMT

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಆರಂಭವಾಗುವ ಸ್ವಲ್ಪ ಮೊದಲು ಭಾರತದ ರಾಷ್ಟ್ರ ಗೀತೆಯನ್ನು ಹಾಡುವಾಗ ಯುವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕಣ್ಣೀರಿಟ್ಟಿರುವ ಪ್ರಸಂಗ ನಡೆದಿದೆ. ಸಹ ಬೌಲರ್ ಜಸ್ ಪ್ರೀತ್ ಬುಮ್ರಾ ಅವರನ್ನು ಸಮಾಧಾನಪಡಿಸಿದ್ದಾರೆ.

ರಾಷ್ಟ್ರಗೀತೆ ಹಾಡುವಾಗ ಸಿರಾಜ್ ಅಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯದಲ್ಲಿದ್ದಾಗಲೇ ಸಿರಾಜ್ ಅವರ ತಂದೆ ಮುಹಮ್ಮದ್ ಗೌಸ್  ನಿಧನರಾಗಿದ್ದರು. ಸಿರಾಜ್ ಅವರಿಗೆ ತಂದೆಯ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

"ನಾನು ಭಾರತಕ್ಕಾಗಿ ಆಡುವುದನ್ನು ಮುಂದುವರಿಸುವೆ. ನನ್ನ ದೇಶಕ್ಕೆ ಹೆಮ್ಮೆ ತರುವೆ. ನನ್ನ ತಂದೆಯ ಕನಸನ್ನು ಈಡೇರಿಸಲು ಬಯಸಿದ್ದೇನೆ'' ಎಂದು ತಂದೆ ತೀರಿಕೊಂಡಿದ್ದ ಸಮಯದಲ್ಲಿ ಸಿರಾಜ್ ಪ್ರತಿಕ್ರಿಯಿಸಿದ್ದರು.

ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಗಾಯಗೊಂಡಿದ್ದ ಕಾರಣ  ಸಿರಾಜ್ ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಐದು ವಿಕೆಟ್ ಗಳನ್ನು ಕಬಳಿಸಿದ್ದರು. ಭಾರತವು ಈಪಂದ್ಯವನ್ನು 8 ವಿಕೆಟ್ ಗಳಿಂದ ಜಯಿಸುವುದರೊಂದಿಗೆ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಭಾರತದ ರಾಷ್ಟಗೀತೆ ಮೊಳಗಿದಾಗ ಸಿರಾಜ್ ಅಳುತ್ತಿರುವ ದೃಶ್ಯವು ವೈರಲ್ ಆಗಿದೆ. ಹೈದರಾಬಾದ್ ನ 26ರ ವಯಸ್ಸಿನ ಸಿರಾಜ್ ಕಣ್ಣೀರಿಡುತ್ತಿರುವುದನ್ನು ಗಮನಿಸಿದ ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಸಮಾಧಾನಪಡಿಸಿದರು.

ಟಾಸ್ ಜಯಿಸಿರುವ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಳೆಯಿಂದಾಗಿ ಪಂದ್ಯ ನಿಂತಾಗ ಆತಿಥೇಯರು 21 ರನ್ ಗೆ 1 ವಿಕೆಟ್ ಕಳೆದುಕೊಂಡಿದ್ದರು. 'ಟರ್ಮಿನೇಟರ್' ಸಿರಾಜ್ ಅವರು ಮತ್ತೊಮ್ಮೆ ಹೊಸ ಚೆಂಡಿನಲ್ಲಿ ಡೇವಿಡ್ ವಾರ್ನರ್ ವಿಕೆಟನ್ನು ಉರುಳಿಸಿದ್ದರು.

ತನ್ನ ಚೊಚ್ಚಲ ಪಂದ್ಯದಲ್ಲಿ ಸಲಹೆಗಳನ್ನು ನೀಡಿದ್ದ ಬುಮ್ರಾಗೆ ಕೃತಜ್ಞತೆ ಸಲ್ಲಿಸಿದ್ದ ಸಿರಾಜ್, ಬುಮ್ರಾರಂತಹ ಹಿರಿಯ ಆಟಗಾರರು ನನ್ನಂತಹ ಕಿರಿಯ ಬೌಲರ್ ಗೆ ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ. ಪ್ರತಿಯೊಂದು ಚೆಂಡಿನ ಮೇಲೆ ಗಮನ ನೀಡುವಂತೆ ಸಲಹೆ ನೀಡಿದ್ದರು ಎಂದು  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News