×
Ad

ಮೂರನೇ ಟೆಸ್ಟ್: ಆಸಿಸ್ ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಿದ ಭಾರತೀಯ ಬೌಲರ್ ಗಳು

Update: 2021-01-08 10:00 IST
27ನೇ ಟೆಸ್ಟ್ ಶತಕ ದಾಖಲಿಸಿದ ಸ್ಟೀವನ್ ಸ್ಮಿತ್

ಸಿಡ್ನಿ, ಜ.8: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯಾವಳಿಯ ಎರಡನೇ ದಿನ ಅತಿಥೇಯ ತಂಡ 338 ರನ್ ಗಳಿಗೆ ಆಲೌಟ್ ಆಗಿದೆ.

ಎರಡು ವಿಕೆಟ್ ನಷ್ಟಕ್ಕ 166 ರನ್‌ಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮರ್ನಸ್ ಲೆಂಬುಶೆನ್ (91) ಮತ್ತು ಸ್ಟೀವನ್ ಸ್ಮಿತ್ (131) ಅವರ ಭರ್ಜರಿ ಬ್ಯಾಟಿಂಗ್‌ನಿಂದ ಭೋಜನ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತ್ತು. ಬಳಿಕ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಹೋದ ಆಸಿಸ್ ಗೆ ಸ್ಮಿತ್ ಆಸರೆಯಾಗಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 27ನೇ ಶತಕ ದಾಖಲಿಸಿದ ಸ್ಮಿತ್ ರನ್ನೌಟ್ ಆಗುವುದರೊಂದಿಗೆ ಆಸ್ಟ್ರೇಲಿಯಾದ ಪ್ರಥಮ ಇನಿಂಗ್ಸ್ 338 ರನ್ ಗಳಿಗೆ ಕೊನೆಗೊಂಡಿತು.

ಭಾರತದ ಪರ ರವೀಂದ್ರ ಜಡೇಜಾ (62ಕ್ಕೆ 4) ಯಶಸ್ವಿ ಬೌಲರ್ ಎನಿಸಿದರು. ಜಸ್‌ಪ್ರೀತ್ ಬೂಮ್ರಾ, ನವದೀಪ್ ಸೈನಿ ತಲಾ 2, ಮುಹಮ್ಮದ್ ಸಿರಾಜ್ ಒಂದು ವಿಕೆಟ್ ಹಂಚಿಕೊಂಡರು.

ಉತ್ತಮವಾಗಿ ಆಡುತ್ತಿದ್ದ ಲಂಬುಶೆನ್, ಅಜಿಂಕ್ಯ ರಹಾನೆಗೆ ಕ್ಯಾಚ್ ನೀಡಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. 13 ರನ್ ಗಳಿಸಿದ ಮ್ಯಾಥ್ಯೂ ವೇಡ್ ಜಡೇಜಾಗೆ ಎರಡನೇ ಬಲಿಯಾದರು. ಕ್ಯಾಮರಾನ್ ಗ್ರೀನ್ ಖಾತೆ ತೆಗೆಯುವ ಮುನ್ನವೇ ಬೂಮ್ರಾ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News