ಮೂರನೇ ಟೆಸ್ಟ್ ವೇಳೆ ಭಾರತದ ಇನ್ನೂ ಇಬ್ಬರು ಆಟಗಾರರಿಗೆ ಗಾಯ

Update: 2021-01-09 07:37 GMT

ಸಿಡ್ನಿ: ಆಸ್ಟ್ರೇಲಿಯ ವಿರುದ್ಧ ಸಾಗುತ್ತಿರುವ ಮಹತ್ವದ ಟೆಸ್ಟ್ ಸರಣಿಯಲ್ಲಿ ಭಾರತೀಯ ಆಟಗಾರರ ಸತತ ಗಾಯದ ಸಮಸ್ಯೆ ಸದ್ಯಕ್ಕೆ ಬಗೆಹರಿಯುವ ಯಾವುದೇ ಲಕ್ಷಣ ಕಾಣಿಸುುತ್ತಿಲ್ಲ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಭಾರತದ ತಂಡದ ಇಬ್ಬರು ಆಟಗಾರರು ಬೆನ್ನುಬೆನ್ನಿಗೆ ಗಾಯದ ಸಮಸ್ಯೆಗೆ ಒಳಗಾದರು.
ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜ ಬ್ಯಾಟಿಂಗ್ ಮಾಡುತ್ತಿರುವ ವೇಳೆಯಲ್ಲಿ ಗಾಯ ಮಾಡಿಕೊಂಡಿದ್ದಾರೆ. ಪಂತ್ ಎಡ ಮೊಣಕೈಗೆ ಗಾಯಮಾಡಿಕೊಂಡಿದ್ದರೆ, ರವೀಂದ್ರ ಜಡೇಜ ಅವರ ಎಡಗೈಯ ಹೆಬ್ಬರಳಿಗೆ ಪೆಟ್ಟು ಬಿದ್ದಿದೆ. ಇವರಿಬ್ಬರನ್ನು ಸ್ಕ್ಯಾನಿಂಗ್ ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಸರಣಿ ಆರಂಭಕ್ಕೆ ಮೊದಲೇ ಸತತ ಗಾಯದ ಸಮಸ್ಯೆ ಅನುಭವಿಸುತ್ತಿರುವ ಟೀಮ್ ಇಂಡಿಯಾಗೆ ಪಂತ್ ಹಾಗೂ ಜಡೇಜ ಗಾಯದಸಮಸ್ಯೆಗೆ ಒಳಗಾಗಿರುವುದು ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ಈ ಇಬ್ಬರು ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಗೆ ಲಭ್ಯವಾಗುವರೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ. 
ಪಂತ್ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕಾಣಿಸಿಕೊಂಡಿರುವ ವೃದ್ದಿಮಾನ್ ಸಹಾ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆ. ಅತ್ತ ರವೀಂದ್ರ ಜಡೇಜ ಎರಡನೇ ಇನಿಂಗ್ಸ್ ನಲ್ಲಿ ಬೌಲಿಂಗ್ ಮಾಡಲು ಮೈದಾನಕ್ಕೆ ಇಳಿಯಲಿಲ್ಲ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News