ಬುಮ್ರಾ, ಸಿರಾಜ್‌ಗೆ ಜನಾಂಗೀಯ ನಿಂದನೆ: ದೂರು ದಾಖಲಿಸಿದ ಬಿಸಿಸಿಐ

Update: 2021-01-09 14:11 GMT

ಹೊಸದಿಲ್ಲಿ, ಜ.9: ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲರ್‌ಗಳಾದ ಜಸ್‌ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್‌ಗೆ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿರುವುದಕ್ಕೆ ಸಂಬಂಧಿಸಿ ಬಿಸಿಸಿಐ ಶನಿವಾರ ಪಂದ್ಯದ ಅಧಿಕಾರಿಗಳಿಗೆ ದೂರನ್ನು ದಾಖಲಿಸಿದೆ.

ಶನಿವಾರದ ದಿನದಾಟ ಮುಗಿದಾಗ ಸಿರಾಜ್ ಹಾಗೂ ಬುಮ್ರಾಗೆ ಕೆಲವು ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಆರೋಪಿಸಿದ್ದಾರೆ ಎಂದು 'ದಿ ಡೈಲಿ ಟೆಲಿಗ್ರಾಫ್' ವರದಿ ಮಾಡಿದೆ.

ಹಿರಿಯ ಆಟಗಾರರೊಂದಿಗೆ ದೀರ್ಘ ಚರ್ಚೆ ನಡೆಸಿದ ಬಳಿಕ ನಾಯಕ ಅಜಿಂಕ್ಯ ರಹಾನೆ ಅವರು ದಿನದಾಟ ಮುಕ್ತಾಯದ ಬಳಿಕ ಮೈದಾನದೊಳಗಿನ ಅಂಪೈರ್‌ಗಳಿಗೆ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಪ್ರೇಕ್ಷಕರು ನಮ್ಮ ಇಬ್ಬರು ಆಟಗಾರರಾದ ಜಸ್‌ಪ್ರಿತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್‌ಗೆ ನಿಂದಿಸಿದ್ದಾರೆ ಎಂದು ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್‌ಗೆ ಬಿಸಿಸಿಐ ಅಧಿಕೃತವಾಗಿ ದೂರು ಸಲ್ಲಿಸಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

2008ರಲ್ಲಿ ಸಿಡ್ನಿಯಲ್ಲೇ ಭಾರತ-ಆಸ್ಟ್ರೇಲಿಯ ಟೆಸ್ಟ್ ಸರಣಿಯ ವೇಳೆ ಜನಾಂಗೀಯ ನಿಂದನೆಗೆ ಸಂಬಂಧಿಸಿದ್ದ 'ಮಂಕಿಗೇಟ್'ವಿವಾದವು ಭಾರೀ ಸುದ್ದಿಯಾಗಿತ್ತು. ಆಗ ಆ್ಯಂಡ್ರೂ ಸೈಮಂಡ್ಸ್ ಅವರು ಹರ್ಭಜನ್ ಸಿಂಗ್ ಅವರು ತನಗೆ ಜನಾಂಗೀಯ ನಿಂದನೆ ಮಾಡಿದ್ದಾರೆ. ತನ್ನನ್ನು 'ಮಂಕಿ' ಎಂದು ಕರೆದಿದ್ದಾರೆ ಎಂದು ಆರೋಪಿಸಿದ್ದರು. ನ್ಯಾಯಾಲಯದ ಹೋರಾಟದ ಬಳಿಕ ಹರ್ಭಜನ್‌ಗೆ ಮೂರು ಟೆಸ್ಟ್‌ನಿಂದ ನಿಷೇಧಿಸಲಾಗಿತ್ತು. ಆದರೆ ಆನಂತರ ಹರ್ಭಜನ್ ಈ ಆರೋಪದಿಂದ ಹೊರಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News