ಸತತ 2ನೇ ದಿನವೂ ಸಿರಾಜ್, ಬುಮ್ರಾಗೆ ಆಸ್ಟ್ರೇಲಿಯ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ

Update: 2021-01-10 07:18 GMT

ಸಿಡ್ನಿ:ಮೂರನೇ ಟೆಸ್ಟ್ನಲ್ಲಿ ಸತತ ಎರಡನೇ ದಿನವೂ ಜನಾಂಗೀಯ ನಿಂದನೆ ದೂರು ಕೇಳಿಬಂದ ಕಾರಣ ಕೆಲವು ಪ್ರೇಕ್ಷಕರನ್ನು ಸಿಡ್ನಿ ಕ್ರಿಕೆಟ್ ಮೈದಾನದಿಂದ ಪೊಲೀಸರು ಹೊರಗೆ ಕಳುಹಿಸಿರುವ ಘಟನೆ ನಡೆದಿದೆ.

ನಾಲ್ಕನೇ ದಿನವಾದ ರವಿವಾರ 86ನೇ ಓವರ್ ನ ಅಂತ್ಯಕ್ಕೆ ಭಾರತದ ನಾಯಕ ಅಜಿಂಕ್ಯ ರಹಾನೆ ಅಂಪೈರ್ ರತ್ತ ತೆರಳಿದರು. ಪ್ರೇಕ್ಷಕರು ಮತ್ತೊಮ್ಮೆ ನಿಂದಿಸಿದ ಕಾರಣ ನಾಯಕ ರಹಾನೆ ಸಹ ಆಟಗಾರರೊಂದಿಗೆ ಈ ಬಗ್ಗೆ ಚರ್ಚಿಸಿದರು.

ವೇಗದ ಬೌಲರ್ ಮುಹಮ್ಮದ್ ಸಿರಾಜ್ ಸ್ಕ್ವಾರ್ ಲೆಗ್ ಬೌಂಡರಿಯಲ್ಲಿ ನಿಂತಿದ್ದಾಗ ಪ್ರೇಕ್ಷಕರು ಅವರನ್ನು ನಿಂದಿಸಿದರು. ಸಿರಾಜ್ ಬೌಲಿಂಗ್‍ನಲ್ಲಿ ಕ್ಯಾಮರೂನ್ ಗ್ರೀನ್ ಸತತ ಎರಡು ಸಿಕ್ಸರ್ ಸಿಡಿಸಿದ ಬಳಿಕ ಪ್ರೇಕ್ಷಕರು ಸಿರಾಜ್ ರನ್ನು ಅಣಕಿಸಿದ್ದಾರೆ.

ಅಂಪೈರ್ ಬೌಂಡರಿ ಲೈನ್‍ನಲ್ಲಿ ಚರ್ಚಿಸಿದ ಕಾರಣ 15 ನಿಮಿಷಗಳ ಕಾಲ  ಪಂದ್ಯ ಸ್ಥಗಿತವಾಯಿತು. ಆ ನಂತರ ಭದ್ರತಾ ಅಧಿಕಾರಿಗಳು,ಪೊಲೀಸರು ಪ್ರೇಕ್ಷಕರ ಸೀಟಿನಲ್ಲಿ ಕುಳಿತ್ತಿದ್ದ ಕೆಲವರನ್ನು ಹೊರಗೆ ಕಳುಹಿಸಿದರು. ಆ ಬಳಿಕ ಪಂದ್ಯ ಮತ್ತೆ ಆರಂಭವಾಯತು.

ಈ ವಿಚಾರದ ಕುರಿತು ಕ್ರಿಕೆಟ್ ಆಸ್ಟ್ರೇಲಿಯವು ಕ್ಷಮೆಯಾಚಿಸಿದೆ. ತಾರತಮ್ಯ ವರ್ತನೆಯನ್ನು ಕ್ರಿಕೆಟ್ ಆಸ್ಟ್ರೇಲಿಯವು ತೀವ್ರವಾಗಿ ಖಂಡಿಸುತ್ತದೆ ಎಂದು ಕ್ರಿಕೆಟ್ ಆಸ್ಟೇಲಿಯದ ಹೆಡ್ ಸಿಯಾನ್ ಕರೊಲ್ ಹೇಳಿದ್ದಾರೆ.

ಸಿರಾಜ್ ಹಾಗೂ ಬುಮ್ರಾಗೆ ಪ್ರೇಕ್ಷಕರು ಸತತ ಎರಡನೇ ದಿನವೂ ಜನಾಂಗೀಯ ನಿಂದನೆ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತನಿಖೆ ಆರಂಭಿಸಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್  ಹಾಗೂ ಬುಮ್ರಾರನ್ನು ಪ್ರೇಕ್ಷಕರು ಗುರಿಯಾಗಿಸಿ ಜನಾಂಗೀಯ ನಿಂದನೆ ಮಾಡಿದ್ದರು. ಸತತ 2ನೇ ದಿನ ರವಿವಾರ ಸಿರಾಜ್‍ಗೆ ಪ್ರೇಕ್ಷಕರು ನಿಂದಿಸಿದಾಗ ಅವರು ಅಂಪೈರ್ ರತ್ತ ತೆರಳಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News