ಕುತೂಹಲ ಘಟ್ಟದಲ್ಲಿ ಮೂರನೇ ಟೆಸ್ಟ್: ನಾಲ್ಕನೇ ದಿನದಾಟದಂತ್ಯಕ್ಕೆ 98 ರನ್ ಗಳಿಸಿದ ಭಾರತ

Update: 2021-01-10 07:32 GMT

ಸಿಡ್ನಿ , ಜ.10: ಪ್ರವಾಸಿ ಭಾರತ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 407 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತವು ನಾಲ್ಕನೇ ದಿನದಾಟದಂತ್ಯಕ್ಕೆ 98 ರನ್ ಗಳಿಸಿದೆ. ಚೇತೇಶ್ವರ ಪೂಜಾರ 9 ಹಾಗೂ ನಾಯಕ ಅಜಿಂಕ್ಯ ರಹಾನ್ 4 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.

ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. ಶುಭಮನ್ ಗಿಲ್ 31 ರನ್ ಗಳಿಸಿ ಔಟಾದರೆ, ರೋಹಿತ್ ಶರ್ಮಾ 52 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.

ಮೂರನೇ ಟೆಸ್ಟ್ ನ ಐದನೇ ದಿನವಾದ ಸೋಮವಾರ ಭಾರತ ಗೆಲುವಿಗೆ ಇನ್ನೂ 309 ರನ್ ಗಳಿಸಬೇಕಿದೆ. ಆಸ್ಟ್ರೇಲಿಯಾ ಸರಣಿ ಮುನ್ನಡೆ ಗಳಿಸಲು ಇನ್ನು 8 ವಿಕೆಟ್ ಪಡೆಯಬೇಕಾಗಿದೆ.

ಇದಕ್ಕೂ ಮೊದಲು ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು, ಭಾರತದ ಗೆಲುವಿಗೆ 407 ರನ್ ಗಳ ಕಠಿಣ ಗುರಿ ನೀಡಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 94 ರನ್ ಮುನ್ನಡೆ ಪಡೆದಿತ್ತು.

ಸ್ಟೀವನ್ ಸ್ಮಿತ್ (81) ಮತ್ತು ಮರ್ನಸ್ ಲ್ಯಾಬುಶೆನ್ (73) ಗ್ರೀನ್ (84) ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿತು. ಟಿಮ್ ಪೈನ್ (ನಾಟೌಟ್ 39) ಗಳಿಸಿ ಕ್ರೀಸ್‌ನಲ್ಲಿದ್ದರು. ಗ್ರೀನ್ ವಿಕೆಟ್ ಪತನದೊಂದಿಗೆ ಆಸ್ಟ್ರೇಲಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಭಾರತದ ಪರ ಅಶ್ವಿನ್ (95ಕ್ಕೆ 2) ಮತ್ತು ನವದೀಪ್ ಸೈನಿ (54ಕ್ಕೆ 2) ಯಶಸ್ವಿ ಬೌಲರ್‌ಗಳೆನಿಸಿದರು. ಮುಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ತಲಾ ಒಂದು ವಿಕೆಟ್ ಕಿತ್ತರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ- 338 ಮತ್ತು 312/6 (ಡಿಕ್ಲೇರ್)

ಭಾರತ- ಮೊದಲ ಇನಿಂಗ್ಸ್ 244 ಮತ್ತು 2ನೇ ಇನ್ನಿಂಗ್ಸ್ 98/2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News