ಕ್ರಿಕೆಟಿಗ ಮುಹಮ್ಮದ್‌ ಸಿರಾಜ್‌ ಗೆ 'ಬ್ರೌನ್‌ ಡಾಗ್‌ʼ ಎಂದು ನಿಂದಿಸಿದ್ದ ಆಸ್ಟ್ರೇಲಿಯಾ ಪ್ರೇಕ್ಷಕರು: ವರದಿ

Update: 2021-01-10 15:05 GMT

ಸಿಡ್ನಿ,ಜ.10: ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳ ನಡುವೆ ಆಸ್ಟ್ರೇಲಿಯಾದ ಸಿಡ್ನಿ ಕ್ರೀಡಾಂಗಣದಲ್ಲಿ ಟೆಸ್ಟ್‌ ಪಂದ್ಯಾಟ ನಡೆಯುತ್ತಿದ್ದು, ಭಾರತೀಯ ಆಟಗಾರರಾದ ಮುಹಮ್ಮದ್‌ ಸಿರಾಜ್‌ ಹಾಗೂ ಜಸ್ಪ್ರೀತ್‌ ಬುಮ್ರಾಗೆ ಆಸ್ಟ್ರೇಲಿಯಾ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆಟಗಾರರು ಆರೋಪಿಸಿದ್ದರು. ಇದೀಗ ಮತ್ತೆ ಇದು ಪುನರಾವರ್ತನೆಯಾಗಿದ್ದು, ಬಳಿಕ ಆ ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರ ಕಳಿಸಲಾಗಿತ್ತು. ಕ್ರಿಕೆಟ್‌ ಆಸ್ಟ್ರೇಲಿಯಾ ಆಟಗಾರರ ಕ್ಷಮೆಯನ್ನೂ ಯಾಚಿಸಿತ್ತು.

ಇದೀಗ ಮುಹಮ್ಮದ್‌ ಸಿರಾಜ್‌ ಕುರಿತಾದಂತೆ ʼಬ್ರೌನ್‌ ಡಾಗ್‌ʼ ಹಾಗೂ ʼಬಿಗ್‌ ಮಂಕಿʼ ಎಂದು ಕರೆದಿದ್ದಾಗಿ ndtv.com ವರದಿ ಮಾಡಿದೆ. ಈ ಘಟನೆ ನಡೆದ ಕೂಡಲೇ ಆಟಗಾರರು ಫೀಲ್ಡ್‌ ನಲ್ಲಿರುವ ಅಂಪೈರ್‌ ಗಳ ಗಮನಕ್ಕೆ ತಂದಿದ್ದರು. ಈ ಎರಡು ಪದಗಳು ಮಾತ್ರವಲ್ಲದೇ ಅವಾಚ್ಯವಾಗಿಯೂ ಆಟಗಾರರನ್ನು ತೆಗಳುತ್ತಿದ್ದರು ಎಂದು ಬಿಸಿಸಿಐ ಮೂಲವೊಂದು PTI ಸುದ್ದಿ ಸಂಸ್ಥೆಗೆ ತಿಳಿಸಿದೆ ಎನ್ನಲಾಗಿದೆ.

ರವಿವಾರದಂದು ಪಂದ್ಯಾಟದ ಮಧ್ಯದಲ್ಲಿ 86ನೇ ಓವರ್‌ ನಡೆಯುತ್ತಿದ್ದ ವೇಳೆ ಸಿರಾಜ್‌ ರವರು ಸ್ಕ್ವೇರ್‌ ಲೆಗ್‌ ಕಡೆಯಿಂದ ಅಂಪೈರ್‌ ಕಡೆ ಧಾವಿಸಿ ಬಂದು ಪ್ರೇಕ್ಷಕರು ನಿಂದಿಸುತ್ತಿರುವ ಕುರಿತು ದೂರು ನೀಡಿದ್ದರು. ಈ ವೇಳೆ ನ್ಯೂ ಸೌತ್‌ ವೇಲ್ಸ್‌ ನ ಪೊಲೀಸ್‌ ಹಾಗೂ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಬರುವವರೆಗೆ 10 ನಿಮಿಷಗಳ ಕಾಲ ಪಂದ್ಯಾಟವನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಪೊಲೀಸರು ಆಗಮಿಸಿ ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News