ಹೋಟೆಲ್ ಜೈಲಿನಂತಾಗಿದೆ, ಟಾಯ್ಲೆಟ್ ಅನ್ನೂ ನಾವೇ ಶುಚಿಗೊಳಿಸಬೇಕು: ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರ ದೂರು

Update: 2021-01-12 12:37 GMT
photo:twitter/bcci

ಮುಂಬೈ,ಜ.12: ಜನವರಿ 15ರಿಂದ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಮಂಗಳವಾರ ಅಪರಾಹ್ನ ಬ್ರಿಸ್ಬೇನ್‍ಗೆ  ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ಗಬ್ಬಾದಿಂದ ಸುಮಾರು ನಾಲ್ಕು ಕಿಮೀ ದೂರದ ಪಂಚತಾರಾ ಹೋಟೆಲ್ ಸೋಫಿಟೆಲ್‍ನಲ್ಲಿ ಉಳಿದುಕೊಂಡಿದ್ದಾರೆ. "ಹೋಟೆಲ್  ಚೆನ್ನಾಗಿದ್ದರೂ ಉಳಿದ ಎಲ್ಲಾ ಉದ್ದೇಶಗಳಿಗಾಗಿ ಇದೊಂದು ಜೈಲಿನಂತಿದೆ," ಎಂದು ಅಲ್ಲಿಗೆ ಆಗಮಿಸಿದ ನಂತರ ಆಟಗಾರರು ಹೇಳಿದ್ದಾರೆ ಎಂದು timesofindia.com ವರದಿ ಮಾಡಿದೆ..

"ನಾವು ನಮ್ಮ ಕೊಠಡಿಗಳಲ್ಲಿ ಬಂಧಿಯಾಗಿದ್ದೇವೆ. ನಮ್ಮ  ಹಾಸಿಗೆಗಳನ್ನು ನಾವೇ ಸರಿಪಡಿಸಬೇಕು, ಟಾಯ್ಲೆಟ್ ಅನ್ನೂ ನಾವೇ ಸ್ವಚ್ಛಗೊಳಿಸಬೇಕು. ಆಹಾರ ಹತ್ತಿರದ ಇಂಡಿಯನ್ ರೆಸ್ಟೋರೆಂಟ್‍ನಿಂದ ನೀಡಲಾಗುತ್ತಿದೆ. ನಮಗೆ ಒದಗಿಸಲಾದ  ಕಟ್ಟಡದ ಅಂತಸ್ತಿನಿಂದ ನಾವು ಆಚೀಚೆ ಹೋಗುವ ಹಾಗಿಲ್ಲ. ಇಡೀ ಹೋಟೆಲ್ ಖಾಲಿಯಿದೆ. ಸ್ವಿಮ್ಮಿಂಗ್ ಪೂಲ್, ಜಿಮ್ ಕೂಡ ನಮ್ಮ ಬಳಕೆಗೆ ಲಭ್ಯವಿಲ್ಲ. ಈ ಹೋಟೆಲ್‍ನ ಎಲ್ಲ ಕೆಫೆ, ರೆಸ್ಟಾರೆಂಟ್‍ಗಳೂ ಬಂದ್ ಆಗಿವೆ," ಎಂದು ಆಟಗಾರರು ಹೇಳಿಕೊಂಡಿದ್ದಾರೆ.

"ಹೊಟೇಲ್‍ನಲ್ಲಿ ಬೇರೆ ಯಾರೂ ಅತಿಥಿಗಳಿಲ್ಲ,  ಹೀಗಿರುವಾಗ ಆಟಗಾರರು ಇಲ್ಲಿನ ಸವಲತ್ತುಗಳನ್ನು ಏಕೆ ಬಳಸಬಾರದು?," ಎಂದು ಅವರು ಪ್ರಶ್ನಿಸಿದ್ದಾರೆ.

ಸಿಡ್ನಿ ಪಂದ್ಯದ ವೇಳೆ ಆಟಗಾರರು ಜನಾಂಗೀಯ ನಿಂದನೆಗೊಳಗಾದರೂ ʼಕ್ರಿಕೆಟ್ ಮುಂದುವರಿಯಬೇಕಿದೆʼ, ಎಂಬ ಮೃದು ನಿಲುವು ತಾಳಿದ್ದ ಭಾರತೀಯ ತಂಡದ ಆಡಳಿತಕ್ಕೆ ಬ್ರಿಸ್ಬೇನ್‍ನಲ್ಲಿನ ವ್ಯವಸ್ಥೆ ಅಸಮಾಧಾನ ತಂದಿದೆ ಹಾಗೂ ಈ ಕುರಿತು ಬಿಸಿಸಿಐಗೆ ಮಾಹಿತಿ ನೀಡಿದೆ.

"ನಾವು ಇಲ್ಲಿಗೆ ಆಗಮಿಸಿದ ನವೆಂಬರ್ ತಿಂಗಳಿನಿಂದ 15ರಿಂದ 20 ಬಾರಿ ಕೋವಿಡ್‍ ಪರೀಕ್ಷಿಸಿದ್ದಾರೆ. ಇದು ಈಗ ವಾಕರಿಕೆ ಬರುವಂತಾಗಿದೆ, ನಮ್ಮ ಮೂಗಿನ ಹೊಳ್ಳೆಗಳು ಬಾತುಕೊಂಡಿವೆ. ನಮಗೆ ಸವಲತ್ತುಗಳನ್ನು ನೀಡಬೇಕು ಇಲ್ಲವೇ ಭಾರತಕ್ಕೆ ವಾಪಸ್ ಕರೆಸಿಕೊಳ್ಳಬೇಕು," ಎಂದೂ ತಂಡದ ಸದಸ್ಯರು ಆಗ್ರಹಿಸಿದ್ದಾಗಿ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News