ಏಳು ವರ್ಷಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಗೆ ಶ್ರೀಶಾಂತ್ ಪುನರಾಗಮನ

Update: 2021-01-12 16:25 GMT

ತಿರುವನಂತಪುರ: ಕೇರಳದ ವೇಗದ ಬೌಲರ್ ಎಸ್. ಶ್ರೀಶಾಂತ್ ಸೋಮವಾರ ಸ್ಪರ್ಧಾತ್ಮಕ ಕ್ರಿಕೆಟಿಗೆ ಏಳು ವರ್ಷಗಳ ಬಳಿಕ ವಾಪಸಾದರು. ತನ್ನ ಪುನರಾಗಮನ ಪಂದ್ಯದಲ್ಲಿ ವಿಕೆಟ್ ಪಡೆದು ಸಂಭ್ರಮಿಸಿದರು.

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕೇರಳ ತಂಡಕ್ಕೆ ಕಳೆದ ತಿಂಗಳು ಆಯ್ಕೆಯಾಗಿದ್ದ ಶ್ರೀಶಾಂತ್,  7 ವರ್ಷಗಳ ಬಳಿಕ ಮೊದಲ ವಿಕೆಟ್ ಉರುಳಿಸಿದರು. ಪುದುಚೇರಿ ವಿರುದ್ದ ಮೊದಲ ವಿಕೆಟನ್ನು ಪಡೆದಿರುವ ಅವರು ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗಿರುವುದನ್ನು ಎಲ್ಲರಿಗೂ ಸಾರಿದರು.

ಶ್ರೀಶಾಂತ್ ಅವರು ರಾಷ್ಟ್ರೀಯ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಫಬೀದ್ ಅಹ್ಮದ್  ವಿಕೆಟ್ ಪಡೆದರು. ಈ ಮೂಲಕ ಪುದುಚೇರಿ ತಂಡ 26 ರನ್ ಗೆ 2 ವಿಕೆಟ್ ಕಳೆದುಕೊಳ್ಳಲು ಕಾರಣರಾದರು.

“ನನಗೆ ಸಾಕಷ್ಟು ಬೆಂಬಲ ಹಾಗೂ ಪ್ರೀತಿಯನ್ನು ನೀಡಿರುವ ಎಲ್ಲರಿಗೂ ಧನ್ಯವಾದ..ಇದು ಕೇವಲ ಆರಂಭ ಮಾತ್ರ.. ನಿಮ್ಮೆಲ್ಲರ ಹಾರೈಕೆ ಹಾಗೂ ಪ್ರಾರ್ಥನೆಯಿಂದಾಗಿ ಇನ್ನಷ್ಟು ಸಾಗಲು ಬಾಕಿ ಇದೆ’’ ಎಂದು ಶ್ರೀಶಾಂತ್ ಟ್ವೀಟಿಸಿದ್ದಾರೆ.

ಪುದುಚೇರಿ 20 ಓವರ್ ಗಳಲ್ಲಿ 138 ರನ್ ಗಳಿಸಿತು. ಕೇರಳದ ಜಲಜ್ ಸಕ್ಸೇನ ಕೇವಲ 13 ರನ್ ನೀಡಿ 3 ವಿಕೆಟ್ ಗಳನ್ನು ಪಡೆದರು. ಕೇರಳ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಜಯಭೇರಿ ಬಾರಿಸಿತು. ನಾಯಕ ಸಂಜು ಸ್ಯಾಮ್ಸನ್ 32 ರನ್ ಹಾಗೂ ರಾಬಿನ್ ಉತ್ತಪ್ಪ 12 ಎಸೆತಗಳಲ್ಲಿ 21 ರನ್ ಗಳಿಸಿದರು.

ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಭಾಗಿಯಾಗಿರುವ ಆರೋಪದಲ್ಲಿ 2013ರಲ್ಲಿ ರಾಜಸ್ತಾನದ ರಾಯಲ್ಸ್ ಸಹ ಆಟಗಾರರಾದ ಅಜಿತ್ ಚಾಂಡಿಲಾ ಹಾಗೂ ಅಂಕೀತ್ ಚವಾಣ್ ಜೊತೆಗೆ ಶ್ರೀಶಾಂತ್ ಅವರನ್ನು  2013ರ ಆಗಸ್ಟ್ ನಲ್ಲಿ ಬಿಸಿಸಿಐ ನಿಷೇಧಿಸಿತ್ತು. ಕಳೆದ ವರ್ಷ ಜೀವಾವಧಿ ನಿಷೇಧವನ್ನು 7 ವರ್ಷಗಳಿಗೆ ಇಳಿಸಲಾಗಿತ್ತು. ಸೆಪ್ಟಂಬರ್ ನಲ್ಲಿ ನಿಷೇಧ ಅಂತ್ಯವಾಗಿತ್ತು.

ಸೋಮವಾರ ನಡೆದಿದ್ದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಶ್ರೀಶಾಂತ್ 29 ರನ್ ನೀಡಿ 1 ವಿಕೆಟ್ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News