‘ಹನುಮ ವಿಹಾರಿ ಕ್ರಿಕೆಟ್ ಅನ್ನು ಕೊಲೆ ಮಾಡಿದ್ದಾರೆ’ ಎಂದ ಕೇಂದ್ರ ಸಚಿವ: ವಿಹಾರಿ ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

Update: 2021-01-13 14:00 GMT

ಸಿಡ್ನಿ,ಜ.13: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಾಟವನ್ನು ಡ್ರಾ ಮಾಡುವಲ್ಲಿ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯಾಟದಲ್ಲಿ ವಿಹಾರಿ 161 ಎಸೆತಗಳಲ್ಲಿ 23 ರನ್ ಬಾರಿಸಿದ್ದರು. ಈ ಕುರಿತು ಟ್ವೀಟ್ ಮಾಡಿದ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ, “ಹನುಮ ವಿಹಾರಿ 109 ಎಸೆತಗಳಲ್ಲಿ 7 ರನ್ ಗಳಿಸಿ ಕ್ರಿಕೆಟ್ ನ ಕೊಲೆ ಮಾಡಿದ್ದಾರೆ” ಎಂದಿದ್ದರು. ಇದಕ್ಕೆ ಕೇವಲ ಎರಡೇ ಪದಗಳಲ್ಲಿ ವಿಹಾರಿ ಸಚಿವರನ್ನು ವ್ಯಂಗ್ಯ ಮಾಡಿದ್ದಾರೆ.

“ಗೆಲ್ಲಿಸಬೇಕಾಗಿದ್ದ ಮ್ಯಾಚ್ ಅನ್ನು 109 ಎಸೆತಗಳಲ್ಲಿ 7 ರನ್ ಗಳಿಸಿದ ಹನುಮ ಬಿಹಾರಿ ಪಂದ್ಯಾಟವನ್ನು ಕೊಲೆ ಮಾಡಿದ್ದು ಮಾತ್ರವಲ್ಲದೇ, ಸಂಪೂರ್ಣ ಕ್ರಿಕೆಟ್ ಅನ್ನೇ ಕೊಲೆಗೈದಿದ್ದಾರೆ. ಅವರು ಜಯಗಳಿಸುವುದನ್ನು ಒಂದು ಆಯ್ಕೆಯಾಗಿ ಪರಿಗಣಿಸಿರಲಿಲ್ಲ. ಇನ್ನು ನನಗೆ ಕ್ರಿಕೆಟ್ ಬಗ್ಗೆ ಏನೂ ತಿಳಿದಿಲ್ಲ” ಎಂದು ಬಾಬುಲ್ ಸುಪ್ರಿಯೋ ಟ್ವೀಟ್ ಮಾಡಿದ್ದರು.

ಈ ಕುರಿತು ಒಂದು ದಿನದ ಬಳಿಕ ಪ್ರತಿಕ್ರಿಯಿಸಿದ ಹನುಮ ವಿಹಾರಿ, ಬಾಬುಲ್ ಸುಪ್ರಿಯೋರ ಟ್ವೀಟ್ ಅನ್ನು ರಿಟ್ವೀಟ್ ಮಾಡಿ, “ಹನುಮ ಬಿಹಾರಿ ಅಲ್ಲ ಹನುಮ ವಿಹಾರಿ” ಎಂದು ಅವರನ್ನು ಲೇವಡಿ ಮಾಡಿದ್ದಾರೆ. ನಿಮ್ಮ ಅನಿಸಿಕೆಯನ್ನು ನಾವು ಪರಿಗಣಿಸುವುದಿಲ್ಲ ಎಂಬ ರೀತಿಯಲ್ಲಿ ಪರೋಕ್ಷವಾಗಿ ಕುಟುಕಿದ್ದಾರೆ. ವಿಹಾರಿಯ ಈ ಪ್ರತಿಕ್ರಿಯೆಯನ್ನು ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡಾ ಶೇರ್ ಮಾಡಿ ವ್ಯಂಗ್ಯವಾಡಿದ್ದಾರೆ.

“ನೀವು ಕೇವಲ ರಾಜಕೀಯದ ಕಡೆ ಗಮನ ನೀಡಿದರೆ ಸಾಕು. ಗಾಯಾಳುವಾಗಿಯೂ ತನ್ನ ಎಲ್ಲವನ್ನೂ ಸಮರ್ಪಿಸಿಕೊಂಡು ವಿಹಾರಿ ಉತ್ತಮವಾಗಿ ಆಡಿದ್ದಾರೆ” ಎಂದು ಟ್ವಿಟರ್ ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News