ಆಸ್ಟ್ರೇಲಿಯ ಪ್ರವಾಸದಲ್ಲಿ ಅಪರೂಪದ ಸಾಧನೆ ಮಾಡಿದ ನಟರಾಜನ್

Update: 2021-01-15 15:05 GMT

ಬ್ರಿಸ್ಬೇನ್:ನೆಟ್ ಬೌಲರ್ ಆಗಿ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಕ್ಕೆ ಬಂದಿದ್ದ ವೇಗದ ಬೌಲರ್ ಟಿ.ನಟರಾಜನ್ ಒಂದೇ ಕ್ರಿಕೆಟ್ ಪ್ರವಾಸದಲ್ಲಿ ಎಲ್ಲ 3 ಮಾದರಿಯ ಕ್ರಿಕೆಟ್ ನಲ್ಲಿ ಚೊಚ್ಚಲ ಪಂದ್ಯ ಆಡಿದ ಭಾರತದ ಮೊದಲ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ತಮಿಳುನಾಡಿನ 29ರ ಹರೆಯದ ಆಟಗಾರ ಶುಕ್ರವಾರ ಬ್ರಿಸ್ಬೇನ್ ನಲ್ಲಿ ಆರಂಭವಾದ ಆಸ್ಟ್ರೇಲಿಯ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡುವ 11ರ ಬಳಗಕ್ಕೆ ಆಯ್ಕೆಯಾಗಿದ್ದಾರೆ.
ನಟರಾಜನ್ ಡಿಸೆಂಬರ್ 2 ರಂದು ಕ್ಯಾನ್‍ಬೆರಾದಲ್ಲಿ ಆಸ್ಟ್ರೇಲಿಯ ವಿರುದ್ಧ್ದ ಮೂರನೇ ಏಕದಿನ ಆಡುವ ಮೂಲಕ ಅಂತರ್ ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು.  ಈ ಪಂದ್ಯವನ್ನು ಭಾರತ 13 ರನ್ ಗಳಿಂದ ಗೆದ್ದುಕೊಂಡಿತ್ತು.
ಮೊದಲ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ್ದ ನಟರಾಜನ್ 70 ರನ್ ಗೆ 2 ವಿಕೆಟ್ ಗಳನ್ನು ಪಡೆದಿದ್ದರು. ಭಾರತವು 2-1 ಅಂತರದಿಂದ ಗೆದ್ದಿರುವ ಟ್ವೆಂಟಿ-20 ಸರಣಿಯಲ್ಲಿ ನಟರಾಜನ್ ಮೊದಲ ಬಾರಿ ಆಡಿದ್ದರು. ಸರಣಿಯಲ್ಲಿ ಒಟ್ಟು 6 ವಿಕೆಟ್ ಗಳನ್ನು ಪಡೆದಿದ್ದರು.
ಎಡಗೈ ವೇಗದ ಬೌಲರ್ ಯುಎಇನಲ್ಲಿ ನಡೆದಿದ್ದ ಐಪಿಎಲ್‍ನಲ್ಲಿ ನೀಡಿದ್ದ ಉತ್ತಮ ಪ್ರದರ್ಶನದ ಆಧಾರದಲ್ಲಿ ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ನಟರಾಜನ್ ಈ ವರ್ಷದ ಐಪಿಎಲ್ ನಲ್ಲಿ ಹೈದರಾಬಾದ್ ಪರ ಅಫ್ಘಾನಿಸ್ತಾನದ ರಶೀದ್ ಖಾನ್(20) ಬಳಿಕ ಗರಿಷ್ಟ ವಿಕೆಟ್(16) ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದ್ದರು.
ನಟರಾಜನ್‍ಗೆ ಟೆಸ್ಟ್ ಕ್ರಿಕೆಟಿಗೆ ಸ್ವಾಗತ. ತಂಗರಸು ನಟರಾಜನ್ ಒಂದೇ ಪ್ರವಾಸದಲ್ಲಿ ಎಲ್ಲ 3 ಮಾದರಿಯ ಅಂತರ್ ರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಆಡಿದ ಭಾರತದ ಮೊದಲ ಆಟಗಾರನಾಗಿದ್ದಾರೆ ಎಂದು ಐಸಿಸಿ ಟ್ವೀಟಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News