ಸೀನಿಯರ್ ಕ್ರಿಕೆಟ್ ತಂಡಕ್ಕೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ

Update: 2021-01-15 09:34 GMT

ಮುಂಬೈ: ಕ್ರಿಕೆಟ್ ಜಗತ್ತಿನ ದಂತಕತೆ ಸಚಿನ್ ತೆಂಡುಲ್ಕರ್ ಅವರ ಪುತ್ರ, ಎಡಗೈ ವೇಗದ ಬೌಲರ್ ಅರ್ಜುನ್ ತೆಂಡುಲ್ಕರ್ ಅವರು ಈಗ ನಡೆಯುತ್ತಿರುವ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟ್ವೆಂಟಿ-20 ಟೂರ್ನಿಯ 'ಇ' ಗುಂಪಿನಲ್ಲಿ ಹರ್ಯಾಣದ ವಿರುದ್ಧದ ಪಂದ್ಯದಲ್ಲಿ ಮುಂಬೈ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. 

ಬಾಂದ್ರಾದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು ಟಾಸ್ ಜಯಿಸಿದ್ದ ಮುಂಬೈ ಬ್ಯಾಟಿಂಗ್ ಆಯ್ದುಕೊಂಡಿದೆ. ಮುಂಬೈ ಹಿರಿಯರ ತಂಡದಲ್ಲಿ ಆಡುವ ಮೂಲಕ 21ರ ಹರೆಯದ ಅರ್ಜುನ್ ತೆಂಡುಲ್ಕರ್ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.
22 ಆಟಗಾರರನ್ನು ತಂಡಕ್ಕೆ ಆಯ್ಕೆಮಾಡಲು ಬಿಸಿಸಿಐ ಅನುಮತಿ ನೀಡಿದ ಬಳಿಕ ಮತ್ತೊಬ್ಬ ವೇಗಿ ಕೃತಿಕ್ ಅನಗವಾಡಿ ಜೊತೆ ತೆಂಡುಲ್ಕರ್ ಅವರನ್ನು ಸಲೀಲ್ ಅಂಕೋಲ ನೇತೃತ್ವದ ಆಯ್ಕೆ ಸಮಿತಿ ಮುಂಬೈ ಹಿರಿಯರ ತಂಡಕ್ಕೆ ಆಯ್ಕೆ ಮಾಡಿತ್ತು.
ಅರ್ಜುನ್ ಈಗಾಗಲೇ ಅಂಡರ್-19  ಹಾಗೂ ಮುಂಬೈ ಅಂಡರ್-19 ತಂಡಗಳಲ್ಲಿ ಆಡಿದ್ದಾರೆ. 2017ರಲ್ಲಿ ಮುಂಬೈ ಅಂಡರ್-19 ತಂಡದಲ್ಲಿ ಆಡಿದ್ದ ಅರ್ಜುನ್ ಮರು ವರ್ಷ ಭಾರತದ ಅಂಡರ್-19 ತಂಡದಲ್ಲಿ ಆಡುವ ಅವಕಾಶ ಪಡೆದಿದ್ದರು. 2018ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಭಾರತದ ಯೂತ್ ಟೆಸ್ಟ್ ಟೂರ್ ನಲ್ಲೂ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News