ಕೊರೋನ ರೂಪಾಂತರ ಎದುರಿಸಲು ವಂಶವೃಕ್ಷ ಅಧ್ಯಯನ ಅಗತ್ಯ ವಿಶ್ವ ಆರೋಗ್ಯ ಸಂಸ್ಥೆ

Update: 2021-01-16 14:37 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 16: ಜಾಗತಿಕ ಮಟ್ಟದಲ್ಲಿ ಹೊಸದಾಗಿ ತಲ್ಲಣ ಉಂಟು ಮಾಡುತ್ತಿರುವ ಕೊರೋನ ವೈರಸ್ ಸಾಂಕ್ರಾಮಿಕದ ರೂಪಾಂತರಿತ ಪ್ರಭೇದಗಳನ್ನು ಎದುರಿಸುವುದಕ್ಕಾಗಿ ವೈರಸ್‌ನ ವಂಶವೃಕ್ಷವನ್ನು ಅಧ್ಯಯನ ಮಾಡುವತ್ತ ಹೆಚ್ಚಿನ ಗಮನವನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ತುರ್ತು ಸಮಿತಿ ಸಭೆ ಶುಕ್ರವಾರ ಕರೆ ನೀಡಿದೆ.

ಹೊಸದಾಗಿ ಪತ್ತೆಯಾಗಿರುವ ಹಾಗೂ ಹೆಚ್ಚು ಸಾಂಕ್ರಾಮಿಕವೆಂಬಂತೆ ಕಂಡುಬರುವ ಹೊಸ ಕೊರೋನ ವೈರಸ್ ಪ್ರಭೇದಗಳ ಬಗ್ಗೆ ತುರ್ತು ಚರ್ಚೆ ನಡೆಸುವುದಕ್ಕಾಗಿ ನಿಗದಿಗಿಂತ ಎರಡು ವಾರಗಳ ಮೊದಲೇ ಈ ಸಭೆಯನ್ನು ಏರ್ಪಡಿಸಲಾಯಿತು ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜಗತ್ತಿನಲ್ಲಿ ಈವರೆಗೆ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ 20 ಲಕ್ಷ ದಾಟಿದೆ.

 ಇತ್ತೀಚೆಗೆ ಪತ್ತೆಯಾಗಿರುವ ಕೊರೋನ ವೈರಸ್ ಪ್ರಭೇದಗಳನ್ನು ಅವುಗಳ ವಂಶವಾಹಿಗಳ ವಂಶವೃಕ್ಷದ ಮೂಲಕ ಮಾತ್ರ ಗುರುತಿಸಬಹುದಾಗಿದೆ. ಈ ವಿಶ್ಲೇಷಣೆಯನ್ನು ಎಲ್ಲ ಕಡೆ ಮಾಡಲು ಸಾಧ್ಯವಿಲ್ಲ.

‘‘ಹೊಸ ಪ್ರಭೇದಗಳನ್ನು ಪತ್ತೆಹಚ್ಚಲು, ವೈರಸ್‌ನ ವಂಶವೃಕ್ಷವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಬೇಕು ಹಾಗೂ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು. ಇನ್ನೂ ಪತ್ತೆಯಾಗದಿರುವ ಮಹತ್ವದ ವಿಷಯಗಳಿಗೆ ಸಂಬಂಧಿಸಿ ಹೆಚ್ಚಿನ ವೈಜ್ಞಾನಿಕ ಸಹಭಾಗಿತ್ವ ರೂಪುಗೊಳ್ಳಬೇಕು’’ ಎಂದು ಆನ್‌ಲೈನ್ ಸಭೆಯ ಬಳಿಕ ನೀಡಿದ ಹೇಳಿಕೆಯೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News