×
Ad

“ಅಮೆರಿಕ ಸಂಸದ ಮೇಲಿನ ದಾಳಿಯಲ್ಲಿ ಸಂಸದರು ಕೈಜೋಡಿಸಿದ್ದರೆ ಅವರ ವಿಚಾರಣೆಯಾಗಬೇಕು”

Update: 2021-01-16 20:29 IST

ವಾಶಿಂಗ್ಟನ್, ಜ. 16: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕ ಸಂಸತ್ ಮೇಲೆ ದಾಳಿ ನಡೆಸುವಲ್ಲಿ ಯಾರಾದರೂ ಸಂಸದರು ನೆರವು ನೀಡಿದ್ದರೆ ಅವರ ವಿಚಾರಣೆಯಾಗಬೇಕು ಎಂದು ಸಂಸತ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ಡೆಮಾಕ್ರಟಿಕ್ ಪಕ್ಷದ ನ್ಯಾನ್ಸಿ ಪೆಲೋಸಿ ಶುಕ್ರವಾರ ಹೇಳಿದ್ದಾರೆ.

ಜನವರಿ 6ರಂದು ಸಂಸತ್‌ನಲ್ಲಿ ಟ್ರಂಪ್ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ಟ್ರಂಪ್‌ರನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಎರಡನೇ ಬಾರಿಗೆ ವಾಗ್ದಂಡನೆಗೆ ಗುರಿಪಡಿಸಲಾಗಿದೆ.

 ಟ್ರಂಪ್‌ರ ಉಗ್ರ ಭಾಷಣ ಕೇಳಿ ಸಂಸತ್‌ನತ್ತ ಧಾವಿಸಿದ ಸಾವಿರಾರು ಟ್ರಂಪ್ ಬೆಂಬಲಿಗರು ಅಲ್ಲಿದ್ದ ಕಡಿಮೆ ಸಂಖ್ಯೆಯ ಪೊಲೀಸರನ್ನು ನಿವಾರಿಸಿಕೊಂಡು ಸಂಸತ್ ಕಟ್ಟಡದೊಳಗೆ ನುಗ್ಗಿದ್ದರು. ಅದೂ ಅಲ್ಲದೆ, ಯಾರ ಕಚೇರಿಗಳು ಎಲ್ಲಿವೆ ಎಂಬ ಬಗ್ಗೆ ಕೆಲವು ಗಲಭೆಕೋರರು ಖಚಿತ ಮಾಹಿತಿಯನ್ನು ಹೊಂದಿದಂತೆ ಕಂಡುಬಂದರು.

ರಿಪಬ್ಲಿಕನ್ ಪಕ್ಷದ ಕೆಲವು ಸಂಸದರು ಟ್ರಂಪ್ ಬೆಂಬಲಿಗರಿಗೆ ಸಹಾಯ ಮಾಡಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಸಂಸದೆಯೂ ಆಗಿರುವ ಅಮೆರಿಕ ನೌಕಾಪಡೆಯ ಮಾಜಿ ಹೆಲಿಕಾಪ್ಟರ್ ಪೈಲಟ್ ಮಿಕೀ ಶೆರಿಲ್ ಆರೋಪಿಸಿದ್ದಾರೆ. ದಾಳಿ ನಡೆಯುವ ಒಂದು ದಿನ ಮುಂಚೆ, ಅಂದರೆ ಜನವರಿ 5ರಂದು ನನ್ನ ಕೆಲವು ಸಹೋದ್ಯೋಗಿಗಳು ಕೆಲವು ಗುಂಪುಗಳನ್ನು ಸಂಸತ್‌ಗೆ ಕರೆದುಕೊಂಡು ಬಂದಿರುವುದನ್ನು ನಾನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.

ದಾಳಿಯ ಮುನ್ನಾ ದಿನ ಸಂಸತ್‌ಗೆ ಜನರನ್ನು ಕರೆದುಕೊಂಡು ಬಂದಿರುವರೆನ್ನಲಾದ ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದೇ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪೆಲೋಸಿ, ‘‘ಸಂಸತ್ ಸದಸ್ಯರು ದಾಳಿಯಲ್ಲಿ ದುಷ್ಕರ್ಮಿಗಳ ಜೊತೆ ಕೈಜೋಡಿಸಿರುವುದು ಕಂಡುಬಂದರೆ, ದಾಳಿಗೆ ಅವರು ಉತ್ತೇಜನ ನೀಡಿದ್ದರೆ, ಕಾನೂನಿನ ಪ್ರಕಾರ ಪ್ರಾಸಿಕ್ಯೂಶನ್ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾಗಿದೆ’’ ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News