ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ : ಹೇಝಲ್‍ವುಡ್ ದಾಳಿಗೆ ಕುಸಿದ ಭಾರತ ತಂಡ

Update: 2021-01-17 04:53 GMT

ಬ್ರಿಸ್ಬೇನ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಮೂರನೇ ದಿನ ಹೇಝಲ್‍ವುಡ್  ಅವರ ಮಾರಕ ದಾಳಿಗೆ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ.

ಆಸ್ಟ್ರೇಲಿಯಾದ 369 ರನ್‌ಗಳಿಗೆ ಉತ್ತರವಾಗಿ 2 ವಿಕೆಟ್ ನಷ್ಟಕ್ಕೆ 62 ರನ್‌ಗಳಿಂದ ದಿನದ ಆಟ ಮುಂದುವರಿಸಿದ ಭಾರತ ಇತ್ತೀಚಿನ ವರದಿಗಳು ಬಂದಾಗ 6 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. ಭಾರತ ಇನ್ನೂ 170 ರನ್‌ಗಳ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದ್ದು, ವಾಷಿಂಗ್ಟನ್ ಸುಂದರ್ (12) ಮತ್ತು ಶಾರ್ದೂಲ್ ಠಾಕೂರ್ (12) ಕ್ರೀಸ್‌ನಲ್ಲಿದ್ದಾರೆ.

ತಾಳ್ಮೆಯ ಆಟವಾಡುತ್ತಿದ್ದ ಚೇತೇಶ್ವರ ಪೂಜಾರ 25 ರನ್ ಗಳಿಸಿದ್ದಾಗ ಹೇಝಲ್‍ವುಡ್ ಬೌಲಿಂಗ್‌ನಲ್ಲಿ ಟಿಮ್ ಪೈನ್‌ಗೆ ಕಾಚ್ ನೀಡಿ ನಿರ್ಗಮಿಸಿದರು. ಆಗ ಭಾರತದ ಸ್ಕೋರ್ 105 ರನ್ ಆಗಿತ್ತು. ಈ ಹಂತದಲ್ಲಿ ನಾಯಕ ಅಜಿಂಕ್ಯ ರಹಾನೆ, ಕರ್ನಾಟಕದ ಮಯಾಂಕ್ ಅಗರ್‌ವಾಲ್ ಅವರೊಂದಿಗೆ ಇನಿಂಗ್ಸ್ ಕಟ್ಟುವ ಪ್ರಯತ್ನ ನಡೆಸಿದರೂ ರಹಾನೆ (37) ಸ್ಟಾರ್ಕ್ ಬೌಲಿಂಗ್‌ನಲ್ಲಿ ವೇಡ್‌ಗೆ ಕ್ಯಾಚ್ ನೀಡಿದರು.

ಭೋಜನ ವಿರಾಮ ಬಳಿಕ ಎರಡನೇ ಎಸೆತದಲ್ಲೇ ಮಯಾಂಕ್ ಅಗರ್‌ವಾಲ್ (38) ಅವರ ವಿಕೆಟ್ ಪಡೆದು ಹೇಝಲ್‍ವುಡ್  ಸಂಭ್ರಮಿಸಿದರು. ಬಳಿಕ ವಿಕೆಟ್ ಕೀಪರ್ ರಿಷಭ್ ಪಂತ್ (23) ಕೂಡಾ ಹೇಝಲ್‍ವುಡ್ ‌ಗೆ ಬಲಿಯಾದರು. ಉಳಿದಂತೆ ಆಸ್ಟ್ರೇಲಿಯಾ ಪರ ಸ್ಟಾರ್ಕ್, ಕಮಿನ್ಸ್ ಹಾಗೂ ಲಿಯಾನ್ ತಲಾ ಒಂದು ವಿಕೆಟ್ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News