ಜನಾಂಗೀಯ ನಿಂದನೆಯ ನಡುವೆಯೂ 5 ವಿಕೆಟ್ ಕಬಳಿಸಿ ದಿಟ್ಟ ಉತ್ತರ ನೀಡಿದ ಸಿರಾಜ್

Update: 2021-01-18 09:25 GMT
photo: bcci

ಬ್ರಿಸ್ಬೇನ್,ಜ.18: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯಾಟದಲ್ಲಿ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮುಹಮ್ಮದ್ ಸಿರಾಜ್ ಐದು ವಿಕೆಟ್ ಕಬಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಕುರಿತಾದಂತೆ ಸಾಮಾಜಿಕ ತಾಣದಾದ್ಯಂತ ಹಿರಿಯ ಆಟಗಾರರಿಂದ ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಪ್ರವಾಸ ಆರಂಭವಾದ ಸಂದರ್ಭದಲ್ಲಿ ಸಿರಾಜ್ ತಂದೆ ನಿಧನರಾಗಿದ್ದರು. ಈ ನಡುವೆ ಸಿರಾಜ್ ವಿರುದ್ಧ ಆಸ್ಟ್ರೇಲಿಯಾ ಪ್ರೇಕ್ಷಕರಿಂದ ಜನಾಂಗೀಯ ನಿಂದನೆ ಕೂಡಾ ಎದುರಿಸಿದ್ದರು. ಇವೆಲ್ಲದರ ನಡುವೆ ಟೆಸ್ಟ್‌ ಪಂದ್ಯಾಟದಲಿ ಪ್ರಥಮ ಬಾರಿಗೆ ಆಸ್ಟ್ರೇಲಿಯಾದ ನೆಲದಲ್ಲಿ ಐದು ವಿಕೆಟ್‌ ಗಳನ್ನು ಕಬಳಿಸಿ ಸಾಧನೆಗೈದಿದ್ದಾರೆ.

5 ವಿಕೆಟ್‌ ಕಿತ್ತ ಸಿರಾಜ್‌ ಹಾಗೂ 4 ವಿಕೆಟ್‌ ಕಬಳಿಸಿದ ಶಾರ್ದೂಲ್‌ ಠಾಕೂರ್‌ ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಚಿನ್‌ ತೆಂಡೂಲ್ಕರ್‌ ಸೇರಿದಂತೆ ಹಲವು ಹಿರಿಯ ಕ್ರಿಕೆಟಿಗರು ಟ್ವೀಟ್‌ ಮಾಡಿದ್ದಾರೆ. “ನಿಮ್ಮ ಸಾಧನೆಯನ್ನು ನಿಮ್ಮ ತಂದೆ ಮೇಲಿನಿಂದ ವೀಕ್ಷಿಸಿ ಸಂತೋಷಪಡುತ್ತಿರಬಹುದು. ನೀವು ನಿಮ್ಮ ತಂದೆ ಹೆಮ್ಮೆಪಡುವಂತೆ ಮಾಡಿದ್ದೀರಿ ಎಂದು ಮಾಜಿ ಕ್ರಿಕೆಟಿಗೆ ವಿವಿಎಸ್‌ ಲಕ್ಷ್ಮಣ್ ಟ್ವೀಟ್‌ ಮಾಡಿದ್ದಾರೆ. ಕೇವಲ ಐದು ವರ್ಷಗಳ ಸಾಧನೆಯ ಅವಧಿಯನ್ನಿಟ್ಟುಕೊಂಡು ಸಿರಾಜ್‌ ರವರಿಗೆ ಜೀವನ ಚರಿತ್ರೆಯನ್ನೇ ಬರೆಯಬಹುದು. ನಿಮ್ಮದು ಸ್ಫೂರ್ತಿಯುತ ಬದುಕು” ಎಂದು‌ ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ.

ನಾಲ್ಕನೇ ಟೆಸ್ಟ್‌ ನ ದ್ವಿತೀಯ ಇನ್ನಿಂಗ್ಸ್‌ ನಲ್ಲಿ ಆಸೀಸ್‌ ನ ಬೃಹತ್‌ ಮೊತ್ತಕ್ಕೆ ಕಡಿವಾಣ ಹಾಕಿದ ಸಿರಾಜ್‌ 73 ರನ್‌ ಗಳನ್ನು ನೀಡಿ 5 ವಿಕೆಟ್‌ ಕಬಳಿಸಿದರು. ಗಾಬಾ ಮೈದಾನದಲಿ ಐದು ವಿಕೆಟ್‌ ಗಳನ್ನು ಪಡೆದಿದ್ದ ಎರಪಳ್ಳಿ ಪ್ರಸನ್ನ, ಬಿಷನ್‌ ಸಿಂಗ್‌ ಬೇಡಿ, ಮದನ್‌ ಲಾಲ್‌, ಜಹೀರ್‌ ಖಾನ್‌ ಸಾಲಿಗೆ ಮುಹಮ್ಮದ್‌ ಸಿರಾಜ್‌ ಸೇರ್ಪಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News