ಕೊಹ್ಲಿ ನಾಯಕತ್ವಕ್ಕೆ ರಹಾನೆ ಸಡ್ಡು?

Update: 2021-01-21 05:50 GMT

 ಹೊಸದಿಲ್ಲಿ, ಜ.20: ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ಅಪೂರ್ವ ಯಶಸ್ಸು ಗಳಿಸಿರುವುದು , ವಿರಾಟ್ ಕೊಹ್ಲಿ ಅವರ ನಾಯಕತ್ವಕ್ಕೆ ಮುಂಬರುವ ಇಂಗ್ಲೆಂಡ್ ವಿರುದ್ಧದ ತವರ ಸರಣಿಯಲ್ಲಿ ಕಠಿಣ ಪರೀಕ್ಷೆ ಎದುರಾಗಲಿದೆ.

  ಭಾರತ ಬ್ರಿಸ್ಬೇನ್‌ನಲ್ಲಿ ಮಂಗಳವಾರ ಅಂತಿಮ ಟೆಸ್ಟ್‌ನಲ್ಲಿ ಆಸ್ಟ್ರೇಲಿಯನ್ನು 3 ವಿಕೆಟ್ ಅಂತರದಲ್ಲಿ ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಟೀಮ್ ಇಂಡಿಯಾ ವಶಪಡಿಸಿಕೊಂಡು, ಬಾರ್ಡರ್-ಗವಾಸ್ಕರ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಆ ಬಳಿಕ ಭಾರತದ ಕ್ರಿಕೆಟ್ ತಂಡ ನ್ಯಾಶನಲ್ ಹೀರೊ ಆಗಿ ಹೊರಹೊಮ್ಮಿದೆ.

   ಟೀಮ್ ಇಂಡಿಯಾ ಕಳೆದ 32 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯಕ್ಕೆ ಮೊದಲ ಬಾರಿ ಬ್ರಿಸ್ಬೇನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲುಣಿಸಿದ ತಂಡವಾಗಿದೆ. ಅಜಿಂಕ್ಯ ರಹಾನೆ ಅವರ ಮಾಸ್ಟರ್ ಕ್ಲಾಸ್ ನಾಯಕತ್ವ ಭಾರತಕ್ಕೆ ಅಪೂರ್ವ ಯಶಸ್ಸು ತಂದುಕೊಟ್ಟಿದೆ. ಗಾಯಾಳುವಾಗಿ ಹೊರಗುಳಿದಿದ್ದ ಹಿರಿಯ ಹಾಗೂ ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಅನನುಭವಿ ಆಟಗಾರರನ್ನು ಕಣಕ್ಕಿಳಿಸಿ ಅವರ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟಿರುವ ರಹಾನೆ ಅವರ ನಾಯಕತ್ವಕ್ಕೆ ಇದೀಗ ಎಲ್ಲಡೆ ಪ್ರಶಂಸೆ ವ್ಯಕ್ತವಾಗಿದೆ.

     ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಎರಡನೇ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ 36 ರನ್‌ಗಳಿಗೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿತ್ತು. ಆ ಬಳಿಕ ನಾಯಕ ಕೊಹ್ಲಿ ಪಿತೃತ್ವ ರಜೆ ಪಡೆದು ತವರಿಗೆ ವಾಪಸಾಗುತ್ತಿದ್ದಂತೆ ಟೀಮ್ ಇಂಡಿಯಾದ ನಾಯಕತ್ವ ಅಜಿಂಕ್ಯ ರಹಾನೆ ಹೆಗಲೇರಿತ್ತು.

  ರಹಾನೆಗೆ ನಾಯಕತ್ವ ಸವಾಲಾಗಿತ್ತು. ಆದರೆ ಅವರು ಎರಡನೇ ಟೆಸ್ಟ್‌ನಲ್ಲಿ ಒತ್ತಡದಲ್ಲೂ ಆಕರ್ಷಕ ಶತಕ ಸಿಡಿಸಿ ತಂಡ 8 ವಿಕೆಟ್‌ಗಳ ಜಯ ಗಳಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಮೂರನೇ ಟೆಸ್ಟ್‌ನಲ್ಲಿ ಭಾರತ ಗೆಲ್ಲಲಿಲ್ಲ. ಆದರೆ ಸೋಲಲು ಇಲ್ಲ. ಡ್ರಾದಲ್ಲಿ ಪಂದ್ಯವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾಗಿತ್ತು.

 ಅಂತಿಮ ಟೆಸ್ಟ್ ಪಂದ್ಯದಲ್ಲಿ ನಿಜವಾಗಿಯೂ ರಹಾನೆ ನಾಯಕತ್ವಕ್ಕೆ ಕಠಿಣ ಸವಾಲು ಎದುರಾಗಿತ್ತು. ಆದರೆ ಅವರು ತಂಡವನ್ನು ಸಮರ್ಥವಾಗಿ ಮುನ್ನಡೆಸಿ ತಂಡಕ್ಕೆ ಗೆಲುವು ತಂದು ಕೊಟ್ಟರು.

 ಫೆಬ್ರವರಿ 5ರಂದು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ಗೆ ಕೊಹ್ಲಿ ಮತ್ತೆ ನಾಯಕನಾಗಿ ಮರಳಲಿದ್ದಾರೆ. ಆದರೆ ರಹಾನೆ ಅವರನ್ನು ನಾಯಕರಾಗಿ ಮುಂದುವರಿಸಬೇಕೆಂದು ಅಭಿಮಾನಿಗಳಿಂದ ಆಗ್ರಹ ಕೇಳಿ ಬಂದಿದೆ.

‘‘ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ಮುಂದುವರಿಸುವುದನ್ನು ನಾನು ನಿಜವಾಗಿಯೂ ಪರಿಗಣಿಸಬಹುದೆಂದು ನಾನು ಭಾವಿಸುತ್ತೇನೆ ’’ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

     ‘‘ ಕೊಹ್ಲಿಗೆ ಬ್ಯಾಟಿಂಗ್ ಕಡೆಗೆ ಮಾತ್ರ ಗಮನಹರಿಸಲು ಅವಕಾಶ ನೀಡಿದರೆ ಭಾರತವು ಇನ್ನಷ್ಟು ಅಪಾಯಕಾರಿಯಾಗುತ್ತದೆ ’’ ಎಂದು ಎಂದು ಅಭಿಪ್ರಾಯಪಟ್ಟಿರುವ ವಾನ್ ಅವರು ರಹಾನೆ ಅವರ ರಣತಂತ್ರವನ್ನು ಶ್ಲಾಘಿಸಿದ್ದಾರೆ. ಅಜಿಂಕ್ಯ ರಹಾನೆ ಟೆಸ್ಟ್ ಮತ್ತು ವಿರಾಟ್ ಕೊಹ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಉಳಿಯಲಿ ಎಂದು ಹಿರಿಯ ಪತ್ರಕರ್ತ ಮತ್ತು ಕೊಹ್ಲಿ ಜೀವನ ಚರಿತ್ರೆ ಬರೆದ ವಿಜಯ್ ಲೋಕಪಲ್ಲಿ ಹೇಳಿದ್ದಾರೆ.

  ಪಂದ್ಯದ ನಂತರ ಗಬ್ಬಾ ಡ್ರೆಸ್ಸಿಂಗ್ ರೂಮ್ ತಂಡದ ಮಾತುಕತೆಯ ವೇಳೆ ಕೋಚ್ ಶಾಸ್ತ್ರಿ ರಹಾನೆ ಅವರ ನಾಯಕತ್ವವನ್ನು ವಿಶೇಷವಾಗಿ ಶ್ಲಾಘಿಸಿದ್ದಾರೆ.

  ‘‘ ನಾವು ಇದ್ದ ಸ್ಥಾನದಿಂದ ತಂಡವನ್ನು ಮುನ್ನಡೆಸುವುದು ಮತ್ತು ನಂತರ ತಿರುಗೇಟು ನೀಡುವಂತೆ ಮಾಡುವುದು ಮತ್ತು ತಂಡ ನಿಯಂತ್ರಣ ಮಾಡುವುದು ಅದ್ಭುತವಾಗಿದೆ ’’ ಎಂದು ಶಾಸ್ತ್ರಿ ಹೇಳಿದರು.

       ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 36 ರನ್‌ಗಳಿಗೆ ಆಲೌಟಾಗಿತ್ತು ಮತ್ತು ಮೂರು ದಿನಗಳಲ್ಲಿ ಆಟವನ್ನು ಮುಗಿಸಿತ್ತು. ಕೊಹ್ಲಿ ಅನುಪಸ್ಥಿತಿ ಮತ್ತು ಗಾಯಾಳುಗಳ ಸಂಖ್ಯೆ ಜಾಸ್ತಿಯಾದಾಗ ನಾಯಕ ರಹಾನೆ ಅವರು ಲಭ್ಯವಿರುವ ಆಟಗಾರರನ್ನು ಬಳಸಿಕೊಂಡು ಸರಣಿ ಗೆಲುವಿನತ್ತ ತಂಡವನ್ನು ಮುನ್ನಡೆಸುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

    ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಮತ್ತು ಖ್ಯಾತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿ ನಿರ್ಣಾಯಕ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮೊದಲು ಹೆಚ್ಚಿನ ಸಮಸ್ಯೆಗಳನ್ನು ಸೃಷ್ಟಿಸಿದ್ದವು.

    ಯುವ ವೇಗಿ ಟಿ.ನಟರಾಜನ್ ಮತ್ತು ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ಮತ್ತು ಚೊಚ್ಚಲ ಪಂದ್ಯವನ್ನಾಡಿದ ಆಟಗಾರರನ್ನು ಸೇರಿಸಿಕೊಂಡು ರಹಾನೆ ಯುವ ತಂಡವನ್ನು ಕಟ್ಟಿದರು. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ತಮ್ಮ ಫಾರ್ಮ್‌ನ ಬಗ್ಗೆ ಅಪಸ್ವರ ಎತ್ತಿದ ಮಂದಿಗೆ ಅಂತಿಮ ಟೆಸ್ಟ್‌ನಲ್ಲಿ ಅಜೇಯ 89 ರನ್ ಗಳಿಸುವ ಮೂಲಕ ಉತ್ತರಿಸಿದರು.

 ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅಂತಿಮ ಟೆಸ್ಟ್‌ನಲ್ಲಿ ವೇಗದ ಬೌಲಿಂಗ ವಿಭಾಗದ ನೇತೃತ್ವ ವಹಿಸಿಕೊಂಡು ಅಪೂರ್ವ ಯಶಸ್ಸು ಗಳಿಸಿದರು.

    

     ಭಾರತ ಸತತ ಗೆಲುವನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದೊಡ್ಡ ಪುನರಾಗಮನ ಎಂದು ಭಾರತದ ಮಾಜಿ ನಾಯಕ ಬಿಶನ್ ಸಿಂಗ್ ಎಂದು ಶ್ಲಾಘಿಸಿದರು. ‘‘ರಹಾನೆ ನಾಯಕರಾಗಿ ಪಿಚ್‌ನಲ್ಲಿ ಗಮನಾರ್ಹವಾದ ಪ್ರದರ್ಶನ ನೀಡಿದ್ದಾರೆ ಮತ್ತು ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರಂತೆ ನಾಯಕತ್ವದಲ್ಲಿ ಲೆಕ್ಕಾಚಾರದ ಕುಶಲತೆಯನ್ನು ಸಾಬೀತು ಪಡಿಸಿದ್ದಾ’’ೆ ಎಂದು ಬೇಡಿ ಹೇಳಿದರು.

    ಪಟೌಡಿ 1968 ರಲ್ಲಿ ಡುನೆಡಿನ್‌ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಮೊದಲ ಸಾಗರೋತ್ತರ ಟೆಸ್ಟ್ ಗೆಲುವಿಗೆ ಭಾರತವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಮೊದಲ ಬಾರಿ ಸರಣಿಯನ್ನು 3-1 ಅಂತದಿಂದ ಜಯಿಸಿತ್ತು. ಅಂದಿನಿಂದ ಭಾರತವು ವಿಶ್ವದ ಅಗ್ರ ಟೆಸ್ಟ್ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು. ಸೌರವ್ ಗಂಗುಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ಕೊಹ್ಲಿ ನಾಯಕತ್ವದಲ್ಲಿ ತನ್ನ ವೈಭವವನ್ನು ಮುಂದುವರಿಸಿದೆ. ಕಳೆದ ಸರಣಿಯಲ್ಲಿ ಹಂಗಾಮಿ ನಾಯಕರಾಗಿದ್ದ ಅಜಿಂಕ್ಯ ರಹಾನೆ ಭಾರತವನ್ನು ವಿಶ್ವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೆ ತಲುಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News