ರಶ್ಯ ಜೊತೆಗಿನ ಪರಮಾಣು ಒಪ್ಪಂದ 5 ವರ್ಷ ಮುಂದುವರಿಸುವ ಪ್ರಸ್ತಾವ ಇಟ್ಟ ಅಮೆರಿಕ

Update: 2021-01-22 17:28 GMT

ವಾಶಿಂಗ್ಟನ್, ಜ. 22: ಪರಮಾಣು ಅಸ್ತ್ರಗಳ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಸಂಬಂಧಿಸಿದ ಅವೆುರಿಕ ಮತ್ತು ರಶ್ಯಗಳ ನಡುವಿನ ಕೊನೆಯ ಒಪ್ಪಂದ ‘ನ್ಯೂ ಸ್ಟಾರ್ಟ್’ನ್ನು ಐದು ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವವನ್ನು ಅವೆುರಿಕದ ನೂತನ ಅಧ್ಯಕ್ಷ ಜೋ ಬೈಡನ್ ಗುರುವಾರ ಮುಂದಿಟ್ಟಿದ್ದಾರೆ. ಆದರೆ, ಇತರ ವಿಷಯಗಳಲ್ಲಿ ರಶ್ಯದ ಮೇಲೆ ಒತ್ತಡ ಹೇರಲು ಪಣತೊಟ್ಟಿದ್ದಾರೆ.

 ಅಮೆರಿಕ ಮತ್ತು ರಶ್ಯಗಳು ತಲಾ 1,550ಕ್ಕಿಂತ ಹೆಚ್ಚು ಪರಮಾಣು ಬಾಂಬ್‌ಗಳನ್ನು ಹೊಂದಬಾರದು ಎಂದು ನಿಗದಿಪಡಿಸುವ ಒಪ್ಪಂದದ ವಾಯಿದೆ ಫೆಬ್ರವರಿ 5ರಂದು ಮುಗಿಯುತ್ತದೆ. ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್‌ರ ಆಡಳಿತದಲ್ಲಿ ಈ ಸಂಬಂಧ ನಡೆದ ಮಾತುಕತೆಗಳು ಫಲಪ್ರದವಾಗಿರಲಿಲ್ಲ.

‘‘ನ್ಯೂ ಸ್ಟಾರ್ಟ್ ಒಪ್ಪಂದವನ್ನು ಐದು ವರ್ಷಗಳ ಅವಧಿಗೆ ವಿಸ್ತರಿಸಲು ಅಮೆರಿಕ ಬದ್ಧವಾಗಿದೆ. ಈ ವಿಸ್ತರಣೆಗೆ ಒಪ್ಪಂದದಲ್ಲಿ ಅವಕಾಶವಿದೆ’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಸುದ್ದಿಗಾರರಿಗೆ ತಿಳಿಸಿದರು.

ನವಾಲ್ನಿ ವಿಷಪ್ರಾಶನದ ಬಗ್ಗೆ ತನಿಖೆ

ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಗೆ ಅಲ್ಲಿನ ಸರಕಾರವೇ ವಿಷಪ್ರಾಶನ ಮಾಡಿರುವ ಆರೋಪದ ಬಗ್ಗೆ ಗುಪ್ತಚರ ಸಂಸ್ಥೆಯ ನೂತನ ಮುಖ್ಯಸ್ಥೆ ಆ್ಯವ್ರಿಲ್ ಹೇನ್ಸ್ ತನಿಖೆ ನಡೆಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದರು.

ಅಮೆರಿಕದ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದೆಯೇ ಹಾಗೂ ಅವೆುರಿಕದ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಮೇಲೆ ನಡೆದ ಬೃಹತ್ ಸೈಬರ್ ದಾಳಿ ‘ಸೋಲಾಡ್-ವಿಂಡ್ಸ್ ಹ್ಯಾಕ್’ನ ಹಿಂದೆ ರಶ್ಯ ಇದೆಯೇ ಎನ್ನುವ ಬಗ್ಗೆಯೂ ಅವರು ತನಿಖೆ ನಡೆಸುತ್ತಾರೆ ಎಂದರು.

ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರನ್ನು ಕೊಲ್ಲಲು ರಶ್ಯ ಗುಪ್ತಚರ ಸಂಸ್ಥೆಯು ಭಯೋತ್ಪಾದಕರಿಗೆ ಬಹುಮಾನ ನೀಡಿರುವುದಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆಯೂ ಅಮೆರಿಕ ತನಿಖೆ ನಡೆಸಲಿದೆ ಎಂದು ಜೆನ್ ಸಾಕಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News