ಸೈನಾ ನೆಹ್ವಾಲ್ ವೃತ್ತಿಬದುಕಿನ ಕಠಿಣ ಹಂತದ ಲ್ಲಿದ್ದಾರೆ: ವಿಮಲ್ ಕುಮಾರ್

Update: 2021-01-24 09:33 GMT

 ಹೊಸದಿಲ್ಲಿ: ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ವೃತ್ತಿಜೀವನದ ಕಠಿಣ ಹಂತದಲ್ಲಿದ್ದಾರೆ. ಇನ್ನಷ್ಟು ಸೋಲುಗಳನ್ನು ತಪ್ಪಿಸಿಕೊಳ್ಳಲು ಸ್ವತಃ ಕಾಳಜಿವಹಿಸಿಕೊಳ್ಳಬೇಕು ಎಂದು ಮಾಜಿ ರಾಷ್ಟ್ರೀಯ ಚಾಂಪಿಯನ್ ಹಾಗೂ ಕೋಚ್ ವಿಮಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ವಿಶ್ವದ 20ನೇ ರ್ಯಾಂಕಿನ ಆಟಗಾರ್ತಿಯಾಗಿರುವ ಸೈನಾ ಈಗ ನಡೆಯುತ್ತಿರುವ ಎರಡನೇ ಥಾಯ್ಲೆಂಡ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಈ ಮೊದಲು ಮೊದಲ ಥಾಯ್ಲೆಂಡ್ ಓಪನ್‌ನ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದ್ದರು. 2020ರ ಮಾರ್ಚ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಬಳಿಕ ಸೈನಾ ಭಾಗವಹಿಸಿರುವ ಮೊದಲ ಟೂರ್ನಮೆಂಟ್ ಇದಾಗಿದೆ.

‘‘ಸೈನಾ ಅವರು ಥಾಯ್ಲೆಂಡ್ ಓಪನ್ ನಲ್ಲಿ ತನ್ನ ಲಯವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವಂತೆ ಕಂಡುಬಂದಿದ್ದರು. ಮೊದಲಿನ ಲಯಕ್ಕೆ ಮರಳುವುದು ಆಕೆಗೆ ಅಷ್ಟೊಂದು ಸುಲಭವಲ್ಲ. ಆಕೆಗೆ ಯಾವುದೇ ಗಾಯದ ಸಮಸ್ಯೆ ಇರದೇ ಇದ್ದರೆ ಚೆನ್ನಾಗಿ ಆಡುತ್ತಾರೆ ಎಂದು ನಾನು ಯಾವಾಗಲೂ ಹೇಳುತ್ತಿರುವೆ. ಆಕೆಗೆ ಗಾಯದ ಸಮಸ್ಯೆಗಿಂತ ಹೆಚ್ಚಾಗಿ ಫಿಟ್ ಇಲ್ಲದಿರುವಂತೆ ಕಾಣುತ್ತಿದ್ದಾರೆ. ಕೋವಿಡ್ ಸಮಸ್ಯೆಯ ಬಳಿಕ ಆಕೆ ಅದರಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ’’ಎಂದು ಕುಮಾರ್ ತಿಳಿಸಿದರು.

ಸೈನಾ ಇದೀಗ ವೃತ್ತಿಜೀವನದ ಅತ್ಯಂತ ಕಠಿಣ ಹಂತದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಎಲ್ಲವೂ ಅವರು ಅಂದುಕೊಂಡಂತೆ ಆಗುತ್ತಿಲ್ಲ. ಸೈನಾಗೆ ಆತ್ಮವಿಶ್ವಾಸದ ಅಗತ್ಯವಿದೆ. 2019ರ ಇಂಡೋನೇಶ್ಯ ಮಾಸ್ಟರ್ಸ್‌ನಲ್ಲಿ ಕೊನೆಯ ಬಾರಿ ಅವರು ಉತ್ತಮ ಫಲಿತಾಂಶ ದಾಖಲಿಸಿದ್ದರು ಎಂದು 1988 ಹಾಗೂ 1989ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದ ಕುಮಾರ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News