ಬ್ರೆಝಿಲ್‌ನಲ್ಲಿ ವಿಮಾನ ಅಪಘಾತ: ಫುಟ್ಬಾಲ್ ಕ್ಲಬ್ ಅಧ್ಯಕ್ಷ, ನಾಲ್ವರು ಆಟಗಾರರ ಮೃತ್ಯು

Update: 2021-01-25 03:41 GMT

ಬ್ರೆಝಿಲ್, ಜ.25: ಬ್ರೆಝಿಲ್‌ನ ಪ್ರಸಿದ್ಧ ಫುಟ್ಬಾಲ್ ಕ್ಲಬ್‌ಗಳಲ್ಲೊಂದಾದ ಪಲ್ಮಸ್ ಫುಟ್ಬಾಲ್ ಕ್ಲಬ್‌ನ ಅಧ್ಯಕ್ಷ ಮತ್ತು ನಾಲ್ವರು ಆಟಗಾರರು ರವಿವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬ್ರೆಝಿಲಿಯನ್ ಕಪ್ ಪಂದ್ಯಾವಳಿಗೆ ಆಟಗಾರರನ್ನು ಕರೆದೊಯ್ಯುತ್ತಿದ್ದ ವಿಮಾನ ಟೇಕಾಫ್ ಆಗುವ ಹಂತದಲ್ಲೇ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ.

ದುರಂತದಲ್ಲಿ ಕ್ಲಬ್‌ನ ಅಧ್ಯಕ್ಷ ಲುಕಾಸ್ ಮೀರಾ, ಆಟಗಾರರಾದ ಲುಕಾಸ್ ಪ್ರಕ್ಷಿಡೆಸ್, ಗುಲ್ಮರ್ ನೋಯಿ, ರೆನಿಲ್ ಮತ್ತು ಮಾರ್ಕಸ್ ಮೊಲಿನರಿ ಮೃತಪಟ್ಟಿದ್ದಾರೆ. ಪೈಲಟ್ ವ್ಯಾಗ್ನರ್ ಕೂಡಾ ದುರಂತದಲ್ಲಿ ಮಡಿದಿದ್ದಾರೆ ಎಂದು ನಾಲ್ಕನೇ ಸ್ತರದ ಪಲ್ಮಸ್ ಕ್ಲಬ್ ಹೇಳಿಕೆನೀಡಿದೆ.

ಪಲ್ಮಸ್ ನಗರದ ಬಳಿಯ ಟೊಕಾನಿಟಿನೀಸ್ ಏವಿಯೇಶನ್ ಅಸೋಶಿಯೇಶನ್ ವಿಮಾನ ನಿಲ್ದಾಣದ ರನ್‌ವೇ ಕೊನೆಯಲ್ಲಿ ಟೇಕಾಫ್ ಆಗುತ್ತಿದ್ದ ಹಂತದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಕ್ಲಬ್ ಹೇಳಿದೆ. ದುರಂತದಲ್ಲಿ ಯಾರೂ ಉಳಿದಿಲ್ಲ ಎಂದು ಕ್ಲಬ್ ಸ್ಪಷ್ಟಪಡಿಸಿದೆ.

ಪಲ್ಮಸ್‌ನಿಂದ ಸುಮಾರು 800 ಕಿಲೋಮೀಟರ್ ದೂರದ ಗೊಯಾನಿಯಾದಲ್ಲಿ ಸೋಮವಾರ ಪಂದ್ಯವನ್ನು ಆಡುವ ಸಲುವಾಗಿ ತಂಡದ ಸದಸ್ಯರನ್ನು ವಿಮಾನದಲ್ಲಿ ಕರೆದೊಯ್ಯಲಾಗುತ್ತಿತ್ತು. ದಕ್ಷಿಣ ಮತ್ತು ಆಗ್ನೇಯ ಬ್ರೆಝಿಲ್‌ನ ಸಾಂಪ್ರದಾಯಿಕ ಪ್ರಬಲ ಕ್ಲಬ್‌ಗಳಿಗೆ ಹೊರತಾದ ಕ್ಲಬ್‌ಗಳಿಗೆ ಮೀಸಲಾದ ಕೋಪಾ ವೆರ್ಡ್ ಟೂರ್ನಿಯ ಅಂತಿಮ 16ರ ಪಂದ್ಯವನ್ನು ಈ ಕ್ಲಬ್ ಆಡಬೇಕಿತ್ತು.

2016ರಲ್ಲಿ ಸಂಭವಿಸಿದ ಇಂಥದ್ದೇ ದುರಂತದಲ್ಲಿ ಇಡೀ ಚೆಪೆಕೊಯೆನ್ಸ್ ತಂಡದ ಸದಸ್ಯರು ಮೃತಪಟ್ಟಿದ್ದರು. ಕೊಲಂಬಿಯಾದಲ್ಲಿ ನಡೆಯುವ ಕೊಪಾ ದೂಡಾ ಮೆರಿಕಾನಾ ಫೈನಲ್‌ನಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಮೆಡೆಲಿನ್ ಪಟ್ಟಣದ ಹೊರಗೆ ಬೆಟ್ಟಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News