ವಿಕ್ಟರ್ ಅಕ್ಸೆಲ್ಸನ್, ಕರೋಲಿನಾ ಮರಿನ್‌ಗೆ ಸತತ ಚಾಂಪಿಯನ್ ಪಟ್ಟ

Update: 2021-01-25 06:15 GMT

 ಬ್ಯಾಂಕಾಕ್, ಜ.24: ಥಾಯ್ಲೆಂಡ್ ಓಪನ್ ಬ್ಯಾಡ್ಮಿಟನ್ ಟೂರ್ನಮೆಂಟ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸನ್ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಸ್ಪೇನ್‌ನ ಒಲಿಂಪಿಕ್ಸ್ ಚಾಂಪಿಯನ್ ಕರೋಲಿನಾ ಮರಿನ್ ರವಿವಾರ ಪ್ರಶಸ್ತಿ ಬಾಚಿಕೊಂಡಿದ್ದಾರೆ.

 ಹದಿನೈದು ದಿನಗಳಲ್ಲಿ ಅಕ್ಸೆಲ್ಸನ್ ಮತ್ತು ಮರಿನ್ ಸತತ ಸಿಂಗಲ್ಸ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.

  ಬ್ಯಾಂಕಾಕ್‌ನಲ್ಲಿ ನಡೆದ ಪುರುಷರ ಫೈನಲ್‌ನಲ್ಲಿ ಅಕ್ಸೆಲ್ಸೆನ್ ತಮ್ಮದೇ ದೇಶದ ಹ್ಯಾನ್ಸ್-ಕ್ರಿಸ್ಟಿಯನ್ ಸೋಲ್ಬರ್ಗ್ ವಿಟಿಂಗಸ್ ವಿರುದ್ಧ 21-11, 21-7 ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

 ಇದರೊಂದಿಗೆ ಅಕ್ಸೆಲ್ಸನ್ ಒಂದೇ ಋತುವಿನಲ್ಲಿ ಸತತ 3 ಸೂಪರ್ 1,000 ಪ್ರಶಸ್ತಿಗಳನ್ನು ಗೆದ್ದ ಮೊದಲ ಸಿಂಗಲ್ಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಪುರುಷರ ರ್ಯಾಂಕಿಂಗ್‌ನಲ್ಲಿ 42ನೇ ಸ್ಥಾನದಲ್ಲಿರುವ ವಿಟಿಂಗಸ್ ಅವರು ಅಚ್ಚರಿಯ ಪ್ರದರ್ಶನ ನೀಡಿ ಫೈನಲ್ ತಲುಪಿದ್ದರು.

 ಮಹಿಳಾ ಡಬಲ್ಸ್‌ನಲ್ಲಿ ಕೊರಿಯಾದ ಆರನೇ ಶ್ರೇಯಾಂಕದ ಕಿಮ್ ಸೋ-ಯೊಂಗ್ ಮತ್ತು ಕಾಂಗ್ ಹೀ-ಯೋಂಗ್ ಅವರು ತಮ್ಮದೇ ದೇಶದ ನಾಲ್ಕನೇ ಶ್ರೇಯಾಂಕದ ಲೀ ಸೋ-ಹೀ ಮತ್ತು ಶಿನ್ ಸೆಯುಂಗ್-ಚಾನ್ ವಿರುದ್ಧ 21-18, 21-19 ಅಂತರದಲ್ಲಿ ಜಯ ಸಾಧಿಸಿದರು.

  ಪುರುಷರ ಡಬಲ್ಸ್‌ನಲ್ಲಿ ಏಳನೇ ಶ್ರೇಯಾಂಕಿತ ಲೀ ಯಾಂಗ್ ಮತ್ತು ತೈವಾನ್‌ನ ವಾಂಗ್ ಚಿ-ಲಿನ್ ಅವರು 36 ನಿಮಿಷಗಳ ಆಟದಲ್ಲಿ ಮಲೇಶ್ಯದ 9ನೇ ಶ್ರೇಯಾಂಕಿತ ಆ್ಯರನ್ ಚಿಯಾ ಮತ್ತು ಸೊಹ್ ವೂಯಿ ಯಿಕ್ ವಿರುದ್ಧ 21-13, 21-18ರಿಂದ ಜಯ ಸಾಧಿಸಿ ಸತತ ಪ್ರಶಸ್ತಿಗಳನ್ನು ಗಳಿಸಿದರು.

 ಕೊರೋನ ವೈರಸ್ ಸೋಂಕಿಗೆ ಬೆದರಿ ಚೀನಾ ಮತ್ತು ಜಪಾನಿನ ಕ್ರೀಡಾಪಟುಗಳು ಬ್ಯಾಂಕಾಕ್ ಪಂದ್ಯಾವಳಿಗಳಲ್ಲಿ ಭಾಗವಹಿಸಿರಲಿಲ್ಲ.

 ►ಹದಿನೈದು ದಿನಗಳಲ್ಲಿ ಅವಳಿ ಪ್ರಶಸ್ತಿ

 ಒಂದೂ ಗೇಮ್ ಸೋಲದೆ ಅವಳಿ ಕಿರೀಟ ಮುಡಿಗೇರಿಸಿದ ಮರಿನ್ ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಕರೊಲಿನಾ ಮರಿನ್ ಹದಿನೈದು ದಿನಗಳಲ್ಲಿ ಒಂದೇ ಎದುರಾಳಿಯನ್ನು ಫೈನಲ್‌ನಲ್ಲಿ ಮಣಿಸಿ ಥಾಯ್ಲೆಂಡ್‌ನ ಓಪನ್‌ನ ಅವಳಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

 ಮಹಿಳಾ ಸಿಂಗಲ್ಸ್‌ನಲ್ಲಿ ಮರಿನ್ ಅವರು ಚೀನಾ ಥೈಪೆಯ ಅಗ್ರ ಶ್ರೇಯಾಂಕಿತೆ ತೈ ಝು-ಯಿಂಗ್ ವಿರುದ್ಧ 21-19, 21-17 ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿಯನ್ನು ಬಾಚಿಕೊಂಡರು.

 ಮಾಜಿ ವಿಶ್ವ ಚಾಂಪಿಯನ್ 27ರ ಹರೆಯದ ಮರಿನ್ ಎರಡು ಪಂದ್ಯಾವಳಿಗಳಲ್ಲಿ ಒಂದೇ ಒಂದು ಗೇಮ್‌ನ್ನು ಕಳೆದುಕೊಳ್ಳದೆ ಫೈನಲ್ ಪ್ರವೇಶಿಸಿ ಪ್ರಶಸ್ತಿ ಬಾಚಿಕೊಂಡಿದ್ದರು. ಕಳೆದ ವಾರ ನಡೆದ ಮೊದಲ ಫೈನಲ್‌ನಲ್ಲಿ ಮರಿನ್ ಸುಲಭವಾಗಿ ಎದುರಾಳಿಯನ್ನು ಮಣಿಸಿದ್ದರು. ಆದರೆ ರವಿವಾರ ನಡೆದ ಫೈನಲ್‌ನಲ್ಲಿ ಕಠಿಣ ಸವಾಲು ಎದುರಿಸಿದ್ದರೂ, ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಅಡ್ಡಿಯಾಗಲಿಲ್ಲ.

  ಅಪಾಯಕಾರಿ ಮರಿನ್ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಿದ್ದಂತೆ ತೈವಾನ್‌ನ 26ರ ಹರೆಯದ ಯಿಂಗ್ ಎರಡನೇ ಸೆಟ್‌ನ ಆರಂಭದಲ್ಲಿ ತನ್ನ ವಿಶ್ವಾಸವನ್ನು ಕಳೆದುಕೊಂಡಂತೆ ಕಾಣಿಸಿಕೊಂಡರು.  

ಮರಿನ್ ತನ್ನ ಗೆಲುವನ್ನು 21-17ರಿಂದ ದೃಢಪಡಿಸಿದರು. 5 ವರ್ಷಗಳ ನಂತರ ಮರಿನ್ ಅವರು ತೈ ಝು-ಯಿಂಗ್ ವಿರುದ್ಧ ಸತತ ನೇರ ಪಂದ್ಯಗಳಲ್ಲಿ ವಿಜಯ ಸಾಧಿಸಿದರು. ‘‘ನನಗೆ ತುಂಬಾ ಸಂತೋಷವಾಗಿದೆ. ಎರಡು ವಾರಗಳಲ್ಲಿ ಎರಡು ವಿಜಯಗಳು, ವರ್ಷವನ್ನು ಪ್ರಾರಂಭಿಸಲು ಇದು ಅದ್ಭುತ ಮಾರ್ಗವಾಗಿದೆ ’’ ಎಂದು ಮರಿನ್ ಹೇಳಿದರು.

  ಒಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ಏಶ್ಯದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಗೆ ಪಾತ್ರವಾಗಿದ್ದ ಮರಿನ್ 2019ರಲ್ಲಿ ಮೊಣಕಾಲಿನ ಗಾಯದಿಂದಾಗಿ ತೊಂದರೆ ಅನುಭವಿಸಿದ್ದರು. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ವರ್ಲ್ಡ್ ಟೂರ್‌ನ ಮೂರನೃ ಹಾಗೂ ಅಂತಿಮ ಪಂದ್ಯಾವಳಿ ಬುಧವಾರ ಇಂಪ್ಯಾಕ್ಟ್ ಅರೆನಾದಲ್ಲಿ ಪ್ರಾರಂಭವಾಗಲಿದೆ. ಪ್ರತಿ ವಿಭಾಗದಲ್ಲೂ ಎಂಟು ಮಂದಿ ಸ್ಪರ್ಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News