ಕಮರಿದ ಸಿಂಧು, ಶೀಕಾಂತ್ ನಾಕೌಟ್ ಕನಸು

Update: 2021-01-29 09:16 GMT

ಬ್ಯಾಂಕಾಕ್ : ಬ್ಯಾಂಕಾಕ್‌ನಲ್ಲಿ ಗುರುವಾರ ನಡೆದ ಬಿಡಬ್ಲುಎಫ್ ವರ್ಲ್ಡ್‌ಟೂರ್ ಫೈನಲ್‌ನಲ್ಲಿ ಸತತ 2ನೇ ದಿನ ಸೋಲು ಅನುಭವಿಸಿದ ಪಿವಿ ಸಿಂಧು ಮತ್ತು ಕಿಡಾಂಬಿ ಶ್ರೀಕಾಂತ್ ಬಿಡಬ್ಲುಎಫ್ ಟೂರ್ ಫೈನಲ್‌ನಿಂದ ಹೊರ ಬಿದ್ದಿದ್ದಾರೆ. ಆಡಿರುವ ಎರಡು ಪಂದ್ಯಗಳಲ್ಲೂ ಸೋಲು ಅನುಭವಿಸಿದ್ದು, ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಸಿಂಧು ಅವರು ‘ಬಿ’ ಗ್ರೂಪ್‌ನಲ್ಲಿ ಥಾಯ್ಲೆಂಡ್‌ನ ರಚನೊಕ್ ಇಂತನಾನ್ ವಿರುದ್ಧ 18-21, 13-21 ಅಂತರದಲ್ಲಿ ಸೋಲು ಅನುಭವಿಸಿದರು. ಇದೇ ವೇಳೆ ಶ್ರೀಕಾಂತ್ ಅವರು ‘ಬಿ’ ಗುಂಪಿನಲ್ಲಿ ಚೀನಾ ತೈಪೆಯ ಝು ವೇ ವಾಂಗ್ ವಿರುದ್ಧ 21-19, 9-21, 19-21ರಲ್ಲಿ ಪರಾಭವಗೊಂಡರು. ಮೊದಲ ಪಂದ್ಯದಲ್ಲಿ ಸಿಂಧು ಅವರು ತೈವಾನ್‌ನ ತೈ ಜು ಯಿಂಗ್ ವಿರುದ್ಧ ಮತ್ತು ಶ್ರೀಕಾಂತ್ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟೊನ್ಸೆನ್ ವಿರುದ್ಧ ಸೋಲು ಅನುಭವಿಸಿದ್ದರು. ಮಹಿಳಾ ಸಿಂಗಲ್ಸ್ ಗ್ರೂಪ್ ‘ಬಿ’ ಪಂದ್ಯದಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪವಿ ಚೋಚುವಾಂಗ್ ಎರಡು ಪಂದ್ಯಗಳನ್ನು ಗೆದ್ದು ಮುಂದಿನ ಹಂತಕ್ಕೆ ತೇರ್ಗಡೆಯಾದರು. ಅವರು ಬುಧವಾರ ರಚನೊಕ್ ಇಂತನಾನ್ ಅವರನ್ನು ಮತ್ತು ಗುರುವಾರ ತೈ ಯಿಂಗ್ ಯಿಂಗ್ ಅವರನ್ನು ಸೋಲಿಸಿದರು. ರಚನೋಕ್ ಮತ್ತು ತೈ ಝು ಯಿಂಗ್ ತಲಾ ಒಂದು ಪಂದ್ಯವನ್ನು ಜಯಿಸಿದ್ದಾರೆ. ಅವರು ಶುಕ್ರವಾರ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದವರು ನಾಕೌಟ್ ಹಂತ ಪ್ರವೇಶಿಸಲಿದ್ದಾರೆ. ಸಿಂಧು ಶುಕ್ರವಾರ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ. ಇನ್ನು ಸಿಂಧು ಜಯ ಗಳಿಸಿದರೂ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವುದಿಲ್ಲ. ಸ್ಪೇನ್‌ನ ಕರೊಲಿನಾ ಮರಿನ್ ಮತ್ತು ದಕ್ಷಿಣ ಕೊರಿಯದ ಆನ್ ಸೆ ಯಂಗ್ ಗುಂಪು ‘ಎ’ ಯಿಂದ ಅರ್ಹತೆ ಪಡೆದರು.

    ಪುರುಷರ ಸಿಂಗಲ್ಸ್ ಗ್ರೂಪ್ ‘ಬಿ’ ಪಂದ್ಯದಲ್ಲಿ ಡೆನ್ಮಾರ್ಕ್‌ನ ಆ್ಯಂಡರ್ಸ್ ಆ್ಯಂಟೊನ್ಸೆನ್ ಮತ್ತು ಚೀನಾ ತೈಪೆಯ ವಾಂಗ್ ಝು ವೀ ತಲಾ ಎರಡು ಪಂದ್ಯಗಳಲ್ಲಿ ಜಯಗಳಿಸಿ ನಾಕೌಟ್ ಹಂತಕ್ಕೆ ತಲುಪಿದರು. ಶ್ರೀಕಾಂತ್ ಅವರು ಶುಕ್ರವಾರ ಹಾಂಗ್ ಕಾಂಗ್‌ನ ಎನ್‌ಜಿ ಕಾ ಲಾಂಗ್ ಆಂಗಸ್ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News