ಉತ್ತಮ ಕುಸ್ತಿಪಟುವಿಗೆ ಸಿಕ್ಕ ಉಡುಗೊರೆ ಏನು ಗೊತ್ತೇ?

Update: 2021-01-31 13:23 GMT
ಫೋಟೊ: insidesport.co

ಆಗ್ರಾ, ಜ.31: ಆಸ್ಟ್ರೇಲಿಯದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಯುವ ಕ್ರಿಕೆಟಿಗರಾದ ಟಿ.ನಟರಾಜನ್, ಶಾರ್ದೂಲ್ ಠಾಕೂರ್, ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್,ನವದೀಪ್ ಸೈನಿ ಹಾಗೂ ಮುಹಮ್ಮದ್ ಸಿರಾಜ್ ಅವರು ಉದ್ಯಮಿಯೊಬ್ಬರಿಂದ ಐಷಾರಾಮಿ ಕಾರೊಂದನ್ನು ಉಡುಗೊರೆಯಾಗಿ ಪಡೆದಿರುವುದು ಇತ್ತೀಚಿಗೆ ದೊಡ್ಡ ಸುದ್ದಿಯಾಗಿತ್ತು. ಆಗ್ರಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಉತ್ತಮ ಕುಸ್ತಿಪಟು 1.5 ಲಕ್ಷ ರೂ. ಬೆಲೆಯ ಎಮ್ಮೆಯನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ.

ಎಮ್ಮೆಯ ಉಡುಗೊರೆ ಹಲವರಿಗೆ ವಿಲಕ್ಷಣವಾಗಿ ಕಂಡುಬಂದರೂ ಸಂಪ್ರದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಎಮ್ಮೆಗಳು ಹಾಗೂ ಹಸುಗಳನ್ನು ಉತ್ತಮ ಕುಸ್ತಿಪಟುವಿಗೆ ಬಹುಮಾನವಾಗಿ ನೀಡುವುದು ಸರ್ವೇ ಸಾಮಾನ್ಯವಾಗಿದೆ. ರವಿವಾರ ಮುಕ್ತಾಯವಾಗಲಿರುವ ಸ್ಪರ್ಧೆಯ ಅತ್ಯುತ್ತಮ ಕುಸ್ತಿಪಟುವನ್ನು ನಿರ್ಧರಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ ಪ್ರಸಾದ್ ಹೇಳಿದ್ದಾರೆ.

ಆಗ್ರಾದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕುಸ್ತಿ ಚಾಂಪಿಯನ್ ಶಿಪ್ ನ ಕೊನೆಯ ದಿನದಂದು ಸ್ಥಳೀಯ ಕ್ರೀಡಾ ಉತ್ಸಾಹಿಯೊಬ್ಬರು 1.5 ಲಕ್ಷ ರೂ. ಮೌಲ್ಯದ ಎಮ್ಮೆಯನ್ನು ಕಾರ್ಯಕ್ರಮದ ಅತ್ಯುತ್ತಮ ಕ್ರೀಡಾಪಟುವಿಗೆ ನೀಡುವ ಬಯಕೆ ವ್ಯಕ್ತಪಡಿಸಿದರು. ಡಬ್ಲುಎಫ್ ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಭಾಷಣದಲ್ಲಿ ಈ ವಿಷಯವನ್ನು ಪ್ರಕಟಿಸಿದರು ಎಂದು ಪ್ರಸಾದ್ IANSಗೆ ತಿಳಿಸಿದರು.

ಒಂದು ವೇಳೆ ಕ್ರೀಡಾಪಟುವಿಗೆ ಎಮ್ಮೆಯನ್ನು ತನ್ನ ಮನೆಗೆ ಸಾಗಿಸಲು ಸಾಧ್ಯವಾಗದೇ ಇದ್ದರೆ 1.5 ಲಕ್ಷ ರೂ. ನಗದು ಬಹುಮಾನವನ್ನು ಪಡೆಯಬಹುದು ಎಂದು ಮಹಾವೀರ ಪ್ರಸಾದ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News