ಮ್ಯಾನ್ಮಾರ್ ನಾಯಕರ ಸೇನಾ ಬಂಧನ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ಖಂಡನೆ

Update: 2021-02-01 18:51 GMT

ವಿಶ್ವಸಂಸ್ಥೆ, ಫೆ. 1: ಆಂಗ್ ಸಾನ್ ಸೂ ಕಿ ಸೇರಿದಂತೆ ಮ್ಯಾನ್ಮಾರ್‌ನ ನಾಯಕರನ್ನು ಸೇನೆ ಬಂಧಿಸಿರುವುದನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೊ ಗುಟೆರಸ್ ತೀವ್ರವಾಗಿ ಖಂಡಿಸಿದ್ದಾರೆ.

ಮ್ಯಾನ್ಮಾರ್‌ನ ನೂತನ ಸಂಸತ್ತಿನ ಆರಂಭಿಕ ಅಧಿವೇಶನದ ಸಂದರ್ಭ ಸ್ಟೇಟ್ ಕೌನ್ಸೆಲರ್ ಆಂಗ್ ಸಾನ್ ಸೂ ಕಿ, ಅಧ್ಯಕ್ಷ ಯು ವಿನ್ ಮಿಂಟ್ ಹಾಗೂ ಇತರ ರಾಜಕೀಯ ನಾಯಕರನ್ನು ಬಂಧಿಸಿರುವುದನ್ನು ಆ್ಯಂಟೋನಿಯೊ ಗುಟೆರಸ್ ಕಟುವಾಗಿ ಟೀಕಿಸಿದ್ದಾರೆ ಎಂದು ವಕ್ತಾರ ಸ್ಟೀಫಾನೆ ಡುಜಾರ್ರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಬೆಳವಣಿಗೆ ಮ್ಯಾನ್ಮಾರ್ ಪ್ರಜಾತಾಂತ್ರಿಕ ಸುಧಾರಣೆಯ ಮೇಲೆ ಅತಿ ದೊಡ್ಡ ಪ್ರಹಾರವನ್ನು ಚಿತ್ರಿಸುತ್ತದೆ ಎಂದು ಅವರು ಹೇಳಿದ್ದಾರೆ. ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸಾನ್ ಸೂ ಕಿ ಅವರ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರೆಸಿಗೆ ಜನಾದೇಶ ದೊರಕಿತ್ತು. ಇದು ಕಷ್ಟಪಟ್ಟು ಗೆದ್ದ ಪ್ರಜಾಪ್ರಭುತ್ವದ ಸುಧಾರಣೆಗಳ ಹಾದಿಯಲ್ಲಿ ಮುಂದುವರಿಯಲು ಮ್ಯಾನ್ಮಾರ್‌ನ ಜನತೆಯ ಇಚ್ಛೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಕ್ತಾರ ಹೇಳಿದ್ದಾರೆ. ಜನತೆಯ ಇಚ್ಛೆಗೆ ಗೌರವ ನೀಡಿ ಹಾಗೂ ಪ್ರಜಾತಾಂತ್ರಿಕ ನಿಯಮಗಳಿಗೆ ಬದ್ಧವಾಗಿರಿ. ಯಾವುದೇ ಭಿನ್ನಾಭಿಪ್ರಾಯವಿದ್ದರೂ ಶಾಂತಯುತ ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ ಎಂದು ಸೇನೆಗೆ ಹೇಳಿಕೆ ಕರೆ ನೀಡಿದೆ. ‘‘ಮ್ಯಾನ್ಮಾರ್‌ನ ಪ್ರಜಾತಾಂತ್ರಿಕ ಸುಧಾರಣೆಯಲ್ಲಿ ಎಲ್ಲಾ ನಾಯಕರು ಅತಿ ಉತ್ಸಾಹದಿಂದ ಕಾರ್ಯ ನಿರ್ವಹಿಸಬೇಕು. ಅರ್ಥಪೂರ್ಣ ಮಾತುಕತೆಯಲ್ಲಿ ತೊಡಗಿಕೊಳ್ಳಬೇಕು. ಹಿಂಸಾಚಾರದಿಂದ ದೂರ ಇರಬೇಕು. ಮಾನವ ಹಕ್ಕುಗಳಿಗೆ ಹಾಗೂ ಮೂಲಭೂತ ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಗೌರವ ನೀಡಬೇಕು’’ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News