ಭಾರತದ ಟೆನಿಸ್ ದಂತಕತೆ ಅಖ್ತರ್ ಅಲಿ ನಿಧನ
ಕೋಲ್ಕತಾ, ಫೆ.7: ಡೇವಿಸ್ ಕಪ್ ನ ಮಾಜಿ ತರಬೇತುದಾರ ಹಾಗೂ ಭಾರತೀಯ ಟೆನಿಸ್ ದಂತಕತೆ ಅಖ್ತರ್ ಅಲಿ ಕ್ಯಾನ್ಸರ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದಾಗಿ ರವಿವಾರ ಮೃತಪಟ್ಟಿದ್ದಾರೆ.
ಕೋಲ್ಕತ್ತಾದಲ್ಲಿ ನಿಧನರಾಗಿರುವ ಅಖ್ತರ್ ಗೆ 83 ವರ್ಷ ವಯಸ್ಸಾಗಿದ್ದು, ಪುತ್ರ ಹಾಗೂ ಭಾರತದ ಹಾಲಿ ಡೇವಿಸ್ ಕಪ್ ಕೋಚ್ ಝೀಶನ್ ಅಲಿ ಅವರನ್ನು ಅಗಲಿದ್ದಾರೆ.
ತನ್ನ ಪುತ್ರ ಝೀಶನ್ ಅಲಿಯವರಲ್ಲದೆ, ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಸಹಿತ ಹಲವರಿಗೆ ತರಬೇತಿಯನ್ನು ನೀಡಿದ್ದಾರೆ. ಇವರ ಕೋಚಿಂಗ್ ಶೈಲಿಯಿಂದ ವಿಜಯ ಅಮೃತರಾಜ್ ಹಾಗೂ ರಮೇಶ್ ಕೃಷ್ಣ ಪ್ರಭಾವಿತರಾಗಿದ್ದರು.
ಅಖ್ತರ್ 1958 ಹಾಗೂ 1964ರ ಮಧ್ಯೆ 8 ಡೇವಿಸ್ ಕಪ್ ಪಂದ್ಯಗಳನ್ನು ಆಡಿದ್ದರು ಹಾಗೂ ಭಾರತೀಯ ಟೆನಿಸ್ ತಂಡದ ನಾಯಕತ್ವದ ಜೊತೆಗೆ ತರಬೇತಿಯನ್ನು ನೀಡಿದ್ದರು.
ಇಲ್ಲಿನ ಡಿಎಲ್ ಟಿಎಯಲ್ಲಿ ಜೂನಿಯರ್ ರಾಷ್ಟ್ರೀಯ ಶಿಬಿರವನ್ನು ನಡೆಸಿದ್ದ ಝೀಶನ್ ತಂದೆಯೊಂದಿಗೆ ಸ್ವಲ್ಪ ಸಮಯ ಕಳೆದ ಬಳಿಕ ರಾಷ್ಟ್ರ ರಾಜಧಾನಿಗೆ ವಾಪಸಾಗಿದ್ದರು. ತಂದೆಯ ನಿಧನದ ಸುದ್ದಿ ಕೇಳಿದ ಬಳಿಕ ಕೋಲ್ಕತಾಕ್ಕೆ ವಾಪಸಾಗಿದ್ದಾರೆ.