×
Ad

ವಸೀಂ ಜಾಫರ್ ಬೆಂಬಲಕ್ಕೆ ನಿಂತ ಅನಿಲ್ ಕುಂಬ್ಳೆ, ಇರ್ಫಾನ್ ಪಠಾಣ್, ಮನೋಜ್ ತಿವಾರಿ

Update: 2021-02-11 18:07 IST

ಹೊಸದಿಲ್ಲಿ: ರಾಜ್ಯ ತಂಡದ ಮುಖ್ಯ ತರಬೇತುದಾರರಾಗಿದ್ದ ಅವಧಿಯಲ್ಲಿ ಉತ್ತರಾಖಂಡ ಡ್ರೆಸ್ಸಿಂಗ್ ಕೊಠಡಿಯನ್ನು ಕೋಮುವಾದಿಕರಣಗೊಳಿಸಿದ್ದಾರೆಂಬ ಆರೋಪಕ್ಕೆ ಒಳಗಾಗಿರುವ ಭಾರತದ ಮಾಜಿ ಬ್ಯಾಟ್ಸ್ ಮನ್ ವಸೀಂ ಜಾಫರ್ ಗೆ ಭಾರತದ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಇರ್ಫಾನ್ ಪಠಾಣ್ ಹಾಗೂ ಮನೋಜ್ ತಿವಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಭಾರತದ ಮಾಜಿ ಆರಂಭಿಕ ಆಟಗಾರ ಜಾಫರ್ ರಾಜ್ಯ ತಂಡದಲ್ಲಿ ಮುಸ್ಲಿಂ ಆಟಗಾರರಿಗೆ ಆದ್ಯತೆ ನೀಡುವ ಮೂಲಕ ಡ್ರೆಸ್ಸಿಂಗ್ ರೂಮ್ ಕೋಮುವಾದಿಕರಣಗೊಳಿಸಿದ್ದಾರೆ ಎಂದು ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹಿಮ್ ವರ್ಮಾ ಹಾಗೂ ಟೀಮ್ ಮ್ಯಾನೇಜರ್ ನವನೀತ್ ಮಿಶ್ರಾ ಆರೋಪಿಸಿದ್ದರು. ಫೆಬ್ರವರಿ 9ರಂದು ಜಾಫರ್ ಮುಖ್ಯ ಕೋಚ್ ಹುದ್ದೆಯನ್ನು ತ್ಯಜಿಸಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಗುರುವಾರ ಪ್ರತಿಕ್ರಿಯಿಸಿದ ಮನೋಜ್ ತಿವಾರಿ, ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್  ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯವಿರುವ ಕ್ರಮ ಕೈಗೊಳ್ಳಬೇಕು. “ರಾಷ್ಟ್ರೀಯ ಹೀರೊ’’ವಸೀಂ ಜಾಫರ್ ಅವರಿಗೆ ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿರುವುದು ದುರದೃಷ್ಟಕರ. ನಮ್ಮ ‘ರಾಷ್ಟ್ರೀಯ ಹೀರೊ’ ಜಾಫರ್ ಅವರಿಗೆ ಈ ರೀತಿಯ ಹಣೆಪಟ್ಟಿ ಕಟ್ಟಿರುವ ರಾಜ್ಯ ಕ್ರಿಕೆಟ್ ಸಂಸ್ಥೆಯ ವಿರುದ್ಧ ಮುಖ್ಯಮಂತ್ರಿ ರಾವತ್ ಕಠಿಣ ಕ್ರಮಗೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ತಿವಾರಿ ಟ್ವೀಟ್ ಮಾಡಿದ್ದಾರೆ.

ವಸೀಂ ಜಾಫರ್ ತನ್ನ ವಿರುದ್ಧ ಆರೋಪಗಳನ್ನು ನಿರಾಕರಿಸಲು ಇಷ್ಟೊಂದು ವಿವರಣೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಬುಧವಾರ ಟ್ವೀಟಿಸಿದ್ದ ಜಾಫರ್ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತಾಗಿ ಕೆಲವು ಸ್ಪಷ್ಟೀಕರಣಗಳನ್ನು ಪಟ್ಟಿ ಮಾಡಿದ್ದರು.

ಭಾರತದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ತನ್ನ ಮಾಜಿ ಸಹ ಆಟಗಾರ ಜಾಫರ್ ಬೆನ್ನಿಗೆ ನಿಂತಿದ್ದು, ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

“ನಾನು ನಿಮ್ಮೊಂದಿಗೆ ಇದ್ದೇನೆ ವಸೀಂ. ನೀವು ಮಾಡಿದ್ದು ಸರಿಯಾಗಿದೆ. ದುರದೃಷ್ವವಶಾತ್ ಆಟಗಾರರು ನಿಮ್ಮ ಸಲಹೆಯಿಂದ ವಂಚಿತರಾಗಿದ್ದಾರೆ’’ ಎಂದು ಕುಂಬ್ಳೆ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News