ನವಾಲ್ನಿ ಬಳಸಿಕೊಂಡು ರಶ್ಯವನ್ನು ನಿಯಂತ್ರಿಸಲು ಪಾಶ್ಚಾತ್ಯ ರಾಷ್ಟ್ರಗಳ ಯತ್ನ: ಪುತಿನ್ ಆರೋಪ

Update: 2021-02-14 15:59 GMT

  ಮಾಸ್ಕೋ,ಫೆ.14: ರಶ್ಯದ ಬಂಧಿತ ಪ್ರತಿಪಕ್ಷ ನಾಯಕ ಅಲೆಕ್ಸೆ ನವಾಲ್ನಿ ಅವರನ್ನು ಬಳಸಿಕೊಂಡು ರಶ್ಯವನ್ನು ನಿಯಂತ್ರಿಸಲು ಪಾಶ್ಚಿಮಾತ್ಯ ದೇಶಗಳು ಯತ್ನಿಸುತ್ತಿವೆಯೆಂದು ರಶ್ಯನ್ ಅಧ್ಯಕ್ಷ ವ್ಲಾದಿಮಿರ್ ಪುತಿನ್ ರವಿವಾರ ಆಪಾದಿಸಿದ್ದಾರೆ.

 ‘‘ನಮ್ಮ ಎದುರಾಳಿಗಳು ಅಥವಾ ನಮ್ಮ ಸಂಭಾವ್ಯ ಎದುರಾಳಿಗಳು ಸದಾ ಕಾಲವೂ ಮಹತ್ವಕಾಂಕ್ಷಿ, ಅಧಿಕಾರದಾಹಿ ಜನರನ್ನು ಅವಲಂಬಿಸಿಕೊಂಡಿದ್ದರು ಹಾಗೂ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಪುತಿನ್ ಅವರು ರಶ್ಯದ ಸುದ್ದಿಸಂಸ್ಥೆಗೆ ಬುಧವಾರ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆದರೆ ಈ ಸಂದರ್ಶನವನ್ನು ರಶ್ಯದ ಸರಕಾರಿ ಸುದ್ದಿವಾಹಿನಿ ರೊಸ್ಸಿಯಾ24 ರವಿವಾರ ಪ್ರಸಾರ ಮಾಡಿದೆ.

  ನವಾಲ್ನಿ ಬಂಧನದ ಹಿನ್ನೆಲೆಯಲ್ಲಿ ರಶ್ಯದಾದ್ಯಂತ ಇತ್ತೀಚೆಗೆ ನಡೆದ ಪ್ರತಿಭಟನೆಗಳಿಗೂ ವಿದೇಶದಿಂದ ಕುಮ್ಮಕ್ಕು ಲಭಿಸಿದೆಯೆಂದು ಅವರು ಆರೋಪಿಸಿದ್ದಾರೆ. ಮಿಲಿಟರಿ ಸ್ತರದಲ್ಲಿ ರಶ್ಯದ ಅಗಾಧ ಸಾಧನೆ ಹಾಗೂ ಕೋವಿಡ್-19 ಬಿಕ್ಕಟ್ಟಿನ ನಿರ್ವಹಣೆ ಹಾಗೂ ಸ್ಪುಟ್ನಿಕ್ V ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದರಿಂದ ಮಾಸ್ಕೋದ ವಿರೋಧಿಗಳಿಗೆ ‘ಕಿರಿಕಿರಿ’ ಉಂಟಾಗಲಾರಂಭಿಸಿದೆ ಎಂದರು. ನಾವು ಬಲಿಷ್ಠರಾದಷ್ಟೂ, ನಮ್ಮನ್ನು ನಿಯಂತ್ರಿಸಬೇಕೆಂಬ ನೀತಿಯೂ ಎದುರಾಳಿಗಳಲ್ಲಿ ಬಲಿಷ್ಠವಾಗತೊಡಗಿದೆ ಎಂದು ಪುತಿನ್ ತಿಳಿಸಿದರು. ಪುತಿನ್ ಅವರ ಕಟು ಟೀಕಾಕಾರರಾದ ನವಾಲ್ನಿ ಅವರು ಕಳೆದ ತಿಂಗಳು ಜರ್ಮನಿಯಿಂದ ವಾಪಾಸಾದ ಬಳಿಕ ಅವರನ್ನು ರಶ್ಯದ ಅಧಿಕಾರಿಗಳು ಬಂಧಿಸಿದ್ದರು. ವಿಷಪ್ರಾಶನಕ್ಕೊಳಗಾದ ಹಿನ್ನೆಲೆಯಲ್ಲಿ ನವಾಲ್ನಿ ಅವರು ಜರ್ಮನಿಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ರಶ್ಯಕ್ಕೆ ವಾಪಸಾಗಿದ್ದರು. ರಶ್ಯದ ಆಡಳಿತ ಹಾಗೂ ರಶ್ಯನ್ ಬೇಹುಗಾರಿಕಾ ಏಜೆನ್ಸಿಗಳು ತನಗೆ ವಿಶಪ್ರಾಶನ ಮಾಡಿಸಿರುವುದಾಗಿ ನವಾಲ್ನಿ ಆಪಾದಿಸಿದ್ದರು.

  44 ವರ್ಷದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ನವಾಲ್ನಿ ಅವರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಅವರ ಬಂಧನದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಈಗಾಗಲೇ 10 ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 ನವಾಲ್ನಿ ಬಂಧನದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಪುತಿನ್ ಆಡಳಿತವು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಲಾಗುತ್ತಿದೆಯೆಂದು ಅಮೆರಿಕ ಹಾಗೂ ಯುರೋಪ್ ಒಕ್ಕೂಟದ ರಾಷ್ಟ್ರಗಳು ಆಪಾದಿಸಿವೆ. ನವಾಲ್ನಿ ಬಂಧನದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ನಿರ್ಬಂಧಗಳನ್ನು ಹೇರುವ ಬಗ್ಗೆ ಯುರೋಪ್ ಒಕ್ಕೂಟವು ಪರಿಶೀಲಿಸುತ್ತಿರುವುದರಿಂದ, ಈಗಾಗಲೇ ಹದಗೆಟ್ಟಿರುವ ದ್ವಿಪಕ್ಷೀಯ ಬಾಂಧವ್ಯವು ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News