×
Ad

ಟೆಸ್ಟ್ ಕ್ರಿಕೆಟ್ ನಿಂದ ಎಫ್ ಡು ಪ್ಲೆಸಿಸ್ ನಿವೃತ್ತಿ

Update: 2021-02-17 12:18 IST

  ಜೋಹಾನ್‌ಬರ್ಗ್, ಫೆ.17: ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಮಾಜಿ ನಾಯಕ ಆಟಗಾರ ಫಾಫ್ ಡು ಪ್ಲೆಸಿಸ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ದಕ್ಷಿಣ ಆಫ್ರಿಕದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವು ದಕ್ಷಿಣ ಆಫ್ರಿಕ ಪ್ರವಾಸವನ್ನು ಸ್ಥಗಿತಗೊಳಿಸಿದ ಕೆಲವೇ ದಿನಗಳ ನಂತರ 36ರ ಹರೆಯದ ಪ್ಲೆಸಿಸ್ ಬುಧವಾರ ನಿವೃತ್ತಿ ಘೋಷಣೆ ಮಾಡಿದ್ದಾರೆ.


 ತನ್ನ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಡು ಪ್ಲೆಸಿಸ್ ತನ್ನ ನಿರ್ಧಾರವನ್ನು ದೃಢಪಡಿಸಿದ್ದಾರೆ. ಡು ಪ್ಲೆಸಿಸ್ 2012ರಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ಕಾಲಿರಿಸಿದ್ದರು. 69 ಟೆಸ್ಟ್‌ಗಳನ್ನು ಆಡಿರುವ ಅವರು 10 ಶತಕ ಮತ್ತು 21 ಅರ್ಧಶತಕಗಳನ್ನು ದಾಖಲಿಸಿದ್ದಾರೆ. 4,163 ರನ್ ಗಳಿಸಿದ್ದಾರೆ. ಡು ಪ್ಲೆಸಿಸ್ ಅವರು 2016ರಲ್ಲಿ ತಮ್ಮ ಬಾಲ್ಯದ ಸ್ನೇಹಿತ ಎಬಿ ಡಿವಿಲಿಯರ್ಸ್ ಅವರಿಂದ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡರು ಮತ್ತು ಕಳೆದ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಸೋಲಿನ ನಂತರ ನಾಯಕತ್ವವನ್ನು ತ್ಯಜಿಸಿದ್ದರು. ಇದಕ್ಕೂ ಮೊದಲು 36 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು.

  ಡು ಪ್ಲೆಸಿಸ್ 2020ರ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಸೆಂಚುರಿಯನ್‌ನಲ್ಲಿ 199 ರನ್ ಗಳಿಸಿದ್ದರು. ಇದು ಅವರ ಟೆಸ್ಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಡು ಪ್ಲೆಸಿಸ್ ಎರಡು ಟ್ವೆಂಟಿ-20ವಿಶ್ವಕಪ್‌ಗಳಲ್ಲಿ ಆಡುವ ಕನಸಿನೊಂದಿಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News