ನೈಜೀರಿಯ: ಬಂದೂಕುಧಾರಿಗಳಿಂದ ನೂರಾರು ವಿದ್ಯಾರ್ಥಿಗಳ ಅಪಹರಣ
ಅಬುಜ (ನೈಜೀರಿಯ), ಫೆ. 17: ಮಧ್ಯ ನೈಜೀರಿಯದಲ್ಲಿ ಕ್ರಿಮಿನಲ್ ತಂಡಗಳಿಗೆ ಸೇರಿದವರೆಂದು ನಂಬಲಾದ ಬಂದೂಕುಧಾರಿಗಳು ನೂರಾರು ಶಾಲಾ ವಿದ್ಯಾರ್ಥಿಗಳನ್ನು ಅವರ ಕೆಲವು ಶಿಕ್ಷಕರ ಸಮೇತ ಅವರ ವಿದ್ಯಾರ್ಥಿನಿಲಯಗಳಿಂದ ಅಪರಹರಿಸ್ದಿದಾರೆ ಎಂದು ಅಧಿಕೃತ ಮೂಲವೊಂದು ಎಎಫ್‌ಪಿ ಸುದ್ದಿಸಂಸ್ಥೆಗೆ ಬುಧವಾರ ತಿಳಿಸಿದೆ.
ಮಂಗಳವಾರ ರಾತ್ರಿ ನೈಜರ್ ರಾಜ್ಯದ ಕಗಾರ ಎಂಬ ಪಟ್ಟಣದಲ್ಲಿರುವ ಸರಕಾರಿ ವಿಜ್ಞಾನ ಕಾಲೇಜ್‌ಗೆ ಭಾರೀ ಸಂಖ್ಯೆಯಲ್ಲಿ ಸೇನಾ ಸಮವಸ್ತ್ರಧಾರಿ ದಾಳಿಕೋರರು ನುಗ್ಗಿ, ವಿದ್ಯಾರ್ಥಿಗಳನ್ನು ಸಮೀಪದ ಕಾಡಿಗೆ ಅಟ್ಟಿಸಿಕೊಂಡು ಹೋದರು ಎಂದು ಮೂಲವೊಂದು ತಿಳಿಸಿದೆ.
ಅಪಹರಣದ ವೇಳೆ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯವಾಗಿ ದರೋಡೆಕೋರರು ಎಂಬುದಾಗಿ ಕರೆಯಲ್ಪಡುವ ಕ್ರಿಮಿನಲ್ ತಂಡಗಳು ವಾಯುವ್ಯ ಮತ್ತು ಮಧ್ಯ ನೈಜೀರಿಯದಲ್ಲಿ ಹೆಚ್ಚು ಸಕ್ರಿಯವಾಗಿವೆ. ಒತ್ತೆಹಣ, ಅತ್ಯಾಚಾರ ಮತ್ತು ದರೋಡೆಗಳನ್ನು ಮಾಡುವುದಕ್ಕಾಗಿ ಅವುಗಳು ಜನರನ್ನು ಅಪಹರಿಸುತ್ತಿವೆ.
ಓರ್ವ ಅಪಹೃತ ಸಿಬ್ಬಂದಿ ಮತ್ತು ಕೆಲವು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಯಲ್ಲಿ ಸುಮಾರು 1,000 ಮಕ್ಕಳಿದ್ದು, ಎಷ್ಟು ಮಂದಿಯನ್ನು ಅಪಹರಿಸಲಾಗಿದೆ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.