ಸೆಮಿ ಫೈನಲ್ ಸೋಲು: ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಅಮೆರಿಕದ ಆಟಗಾರ್ತಿ ಸೆರೆನಾ

Update: 2021-02-18 13:51 GMT

 ಮೆಲ್ಬೋರ್ನ್, ಫೆ.18: ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರ 24ನೇ ಗ್ರಾನ್ ಸ್ಲಾಮ್ ಪ್ರಶಸ್ತಿಯ ಕನಸು ಭಗ್ನವಾಗಿದೆ. ಗುರುವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸೆಮಿ ಫೈನಲ್‌ನಲ್ಲಿ ಹಿರಿಯ ಆಟಗಾರ್ತಿ ಸೆರೆನಾ ಅವರು ಜಪಾನ್ ನವೊಮಿ ಒಸಾಕಾ ವಿರುದ್ಧ 6-3, 6-4 ನೇರ ಸೆಟ್ ಗಳಿಂದ ಸೋಲುಂಡರು. ಸೆರೆನಾಗೆ ಶಾಕ್ ನೀಡಿದ ಒಸಾಕಾ ಎರಡನೇ ಬಾರಿ ಆಸ್ಟ್ರೇಲಿಯ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
 ಈ ಆಘಾತಕಾರಿ ಸೋಲಿನಿಂದಾಗಿ 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ತಲುಪಿ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವುದರೊಂದಿಗೆ ಮಾರ್ಗರೆಟ್ ಕೋರ್ಟ್ ದಾಖಲೆಯನ್ನು ಸರಿಗಟ್ಟ ಬೇಕೆನ್ನುವ ಸೆರೆನಾರ ಕನಸು ಕನಸಾಗಿಯೇ ಉಳಿದಿದೆ.

 2018ರ ಅಮೆರಿಕ ಓಪನ್ ಫೈನಲ್ ಹಣಾಹಣಿಯ ಬಳಿಕ ಸೆರೆನಾ-ಒಸಾಕಾ ಮತ್ತೊಮ್ಮೆ ಮುಖಾಮುಖಿಯಾಗಿದ್ದರು. 39ರ ಹರೆಯದ ಅನುಭವಿ ಆಟಗಾರ್ತಿ ಸೆರೆನಾರನ್ನು ಸೋಲಿಸುವ ಮೂಲಕ ಮಹಿಳಾ ಟೆನಿಸ್‌ನ ಹೊಸ ರಾಣಿಯಾಗಿ ಹೊರಹೊಮ್ಮುವ ಮುನ್ಸೂಚನೆ ನೀಡಿದರು.
ಸೆರೆನಾ ಸೋಲಿನ ನೋವನ್ನು ತಾಳಲಾರದೆ ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿದರು.

‘‘ನನಗೆ ಪಂದ್ಯ ಗೆಲ್ಲುವ ಸಾಕಷ್ಟು ಅವಕಾಶಗಳಿದ್ದವು. ನಾನು ಬಹಳಷ್ಟು ತಪ್ಪುಗಳನ್ನು ಎಸಗಿದೆ. ನಾನು ಮಾಡಿದ್ದ ತಪ್ಪು ನಮ್ಮಿಬ್ಬರ ಆಟದಲ್ಲಿ ವ್ಯತ್ಯಾಸ ಉಂಟು ಮಾಡಿತು’’ಎಂದು ಕಣ್ಣೀರಿಡುತ್ತಾ ಸೆರೆನಾ ಪತ್ರಿಕಾಗೋಷ್ಠಿಯನ್ನು ಮೊಟಕುಗೊಳಿಸಿದರು.

2019ರ ಚಾಂಪಿಯನ್ ಒಸಾಕಾ ನಾಲ್ಕನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಮತ್ತೊಂದು ಸೆಮಿ ಫೈನಲ್‌ನಲ್ಲಿ ಜಯ ಸಾಧಿಸಲಿರುವ ಜೆನ್ನಿಫರ್ ಬ್ರಾಡಿ ಹಾಗೂ ಕರೊಲಿನಾ ಮುಚೊವಾರನ್ನು ಎದುರಿಸಲಿದ್ದಾರೆ.

‘‘ಸೆರೆನಾ ವಿರುದ್ಧ ಆಡುವುದು ಯಾವಾಗಲೂ ಒಂದು ಗೌರವ. ನಾನು ಉತ್ತಮ ಪ್ರದರ್ಶನ ನೀಡಲು ಯತ್ನಿಸಿದ್ದೆ. ನಾನು ಚಿಕ್ಕವಳಿದ್ದಾಗಲೇ ಸೆರೆನಾರ ಆಟವನ್ನು ನೋಡುತ್ತಿದ್ದೆ. ಅವರ ವಿರುದ್ಧ ಆಡುವುದು ಕನಸಾಗಿದೆ’’ ಎಂದು ಒಸಾಕಾ ಪ್ರತಿಕ್ರಿಯಿಸಿದರು.

ಮತ್ತೊಮ್ಮೆ ದಾಖಲೆ ಅಂಚಿನಲ್ಲಿ ಎಡವಿದ ಸೆರೆನಾ

 ಸೆರೆನಾ ಮತ್ತೊಮ್ಮೆ ದಾಖಲೆ ನಿರ್ಮಿಸುವ ಹೊಸ್ತಿಲಲ್ಲಿ ಎಡವಿದ್ದಾರೆ. 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯ ಬಾರಿ ಪ್ರಮುಖ ಪ್ರಶಸ್ತಿ ಎತ್ತಿಹಿಡಿದಿದ್ದರು. ಆ ನಂತರ ನಾಲ್ಕು ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದರೂ ಪ್ರಶಸ್ತಿ ಕೈಗೆಟುಕಿಲ್ಲ. ಸೆರೆನಾ ಹಾಗೂ ಒಸಾಕಾ 2018ರಲ್ಲಿ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದಾಗ ಹಲವು ನಾಟಕೀಯ ದೃಶ್ಯಗಳು ಕಂಡುಬಂದಿತ್ತು. ಆ ಪಂದ್ಯದಲ್ಲಿ  ತಾಳ್ಮೆ ಕಳೆದುಕೊಂಡಿದ್ದ ಸೆರೆನಾ ಚೇರ್ ಅಂಪೈರ್ ಮೇಲೆ ರೇಗಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News