ದಕ್ಷಿಣ ಆಫ್ರಿಕ ಪ್ರಭೇದದಿಂದ ಫೈಝರ್ ಲಸಿಕೆಯ ರೋಗನಿರೋಧಕ ಶಕ್ತಿ ಕುಸಿತ

Update: 2021-02-18 17:12 GMT

 ವಾಶಿಂಗ್ಟನ್, ಫೆ. 18: ಕೊರೋನ ವೈರಸ್ ವಿರುದ್ಧ ಫೈಝರ್-ಬಯೋಎನ್‌ಟೆಕ್ ಲಸಿಕೆ ಒದಗಿಸುವ ರೋಗನಿರೋಧಕ ಸಾಮರ್ಥ್ಯವನ್ನು ವೈರಸ್‌ನ ದಕ್ಷಿಣ ಆಫ್ರಿಕ ಪ್ರಭೇದವು ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಬಹುದು ಎಂಬುದಾಗಿ ಪ್ರಯೋಗಾಲಯದಲ್ಲಿ ನಡೆಸಲಾದ ಅಧ್ಯಯನವೊಂದು ಸೂಚಿಸಿದೆ ಎಂದು ಲಸಿಕೆ ತಯಾರಕ ಕಂಪೆನಿಗಳು ಬುಧವಾರ ಹೇಳಿವೆ. ಅದೂ ಅಲ್ಲದೆ, ಕೊರೋನ ವೈರಸ್‌ನ ರೂಪಾಂತರಿತ ಪ್ರಭೇದಗಳಿಗೆ ಈ ಲಸಿಕೆಯು ಪರಿಣಾಮಕಾರಿಯಾಗುವುದೇ ಎನ್ನುವುದೂ ಸ್ಪಷ್ಟವಾಗಿಲ್ಲ ಎಂದು ಅವು ತಿಳಿಸಿವೆ.

ಈ ಲಸಿಕೆಯನ್ನು ಅಮೆರಿಕದ ಫೈಝರ್ ಔಷಧ ತಯಾರಿಕಾ ಕಂಪೆನಿ ಮತ್ತು ಜರ್ಮನಿಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಬಯೋಎನ್‌ಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

ವೈರಸನ್ನು ನಿಷ್ಕ್ರಿಯಗೊಳಿಸಲು ಲಸಿಕೆಗೆ ಈಗಲೂ ಸಾಧ್ಯವಾಗುತ್ತದೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಆದರೆ, ಲಸಿಕೆ ನೀಡುವ ರೋಗನಿರೋಧಕ ಶಕ್ತಿಯನ್ನು ವೈರಸ್‌ನ ದಕ್ಷಿಣ ಆಫ್ರಿಕ ಪ್ರಭೇದವು ಕಡಿಮೆಗೊಳಿಸುತ್ತದೆ ಎನ್ನುವುದಕ್ಕೆ ಜನರಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಸಾಬೀತಾಗಿಲ್ಲ ಎಂದು ಕಂಪೆನಿಗಳು ಹೇಳಿವೆ.

 ಇದರ ಹೊರತಾಗಿಯೂ, ತಮ್ಮ ಕೊರೋನ ವೈರಸ್ ಲಸಿಕೆಯ ಪರಿಷ್ಕೃತ ಮಾದರಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೂಡಿಕೆಗಳನ್ನು ಮಾಡಲಾಗುತ್ತಿದೆ ಹಾಗೂ ನಿಯಂತ್ರಣ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪೆನಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News