×
Ad

ಇರಾನ್ ಜೊತೆ ಮಾತುಕತೆಗೆ ಮುಂದಾದ ಅಮೆರಿಕ

Update: 2021-02-19 22:48 IST

ವಾಶಿಂಗ್ಟನ್, ಫೆ. 19: ಇರಾನ್ ಜೊತೆಗಿನ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಅಮೆರಿಕದ ಬೈಡನ್ ಸರಕಾರವು ಆ ದೇಶದೊಂದಿಗೆ ಮಾತುಕತೆ ನಡೆಸಲು ಗುರುವಾರ ಮುಂದಾಗಿದೆ ಹಾಗೂ ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತವು ಇರಾನ್ ವಿರುದ್ಧ ಹೇರಿದ್ದ ಎರಡು ನಿರ್ಬಂಧಗಳನ್ನು ವಾಪಸ್ ಪಡೆದಿದೆ.

ಟ್ರಂಪ್ ಸರಕಾರ ಹೇರಿರುವ ದಿಗ್ಬಂಧನಗಳನ್ನು ಹಿಂದಕ್ಕೆ ಪಡೆಯದಿದ್ದರೆ ವಿಶ್ವಸಂಸ್ಥೆಯ ಪರಿಮಾಣು ತಪಾಸಕರಿಗೆ ತನ್ನ ಪರಮಾಣು ಸಂಸ್ಥಾಪನೆಗಳ ಸಂಪೂರ್ಣ ತಪಾಸಣೆ ನಡೆಸಲು ಅವಕಾಶ ನೀಡುವುದಿಲ್ಲ ಎಂಬುದಾಗಿ ಇರಾನ್ ಎಚ್ಚರಿಸಿದ ಬಳಿಕ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ.

ಇರಾನ್ ನೀಡಿರುವ ಗಡುವು ಮುಕ್ತಾಯಗೊಳ್ಳಲು ಮೂರು ದಿನಗಳು ಇರುವಂತೆಯೇ, ಪ್ರಬಲ ರಾಷ್ಟ್ರಗಳೊಂದಿಗೆ ಇರಾನ್ ಮಾಡಿಕೊಂಡಿರುವ ಒಪ್ಪಂದವನ್ನು ಉಳಿಸಿಕೊಳ್ಳಲು ಅಮೆರಿಕ ಮುಂದಾಗಿದೆ.

ಇರಾನ್‌ನ ಕ್ರಮವು ‘ಅಪಾಯಕಾರಿ’ ಎಂಬುದಾಗಿ ಅಮೆರಿಕದ ವಿದೇಶ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಹಾಗೂ ಯುರೋಪಿಯನ್ ದೇಶಗಳು ಎಚ್ಚರಿಸಿದವು. ಬಳಿಕ ಬ್ಲಿಂಕನ್ ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿಯ ವಿದೇಶ ಸಚಿವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಮಾತುಕತೆಯಲ್ಲಿ ಇರಾನ್‌ನೊಂದಿಗೆ ಅನೌಪಚಾರಿಕ ಮಾತುಕತೆ ನಡೆಸುವ ತೀರ್ಮಾನಕ್ಕೆ ಬರಲಾಯಿತು.

ಇರಾನ್ ರಾಜತಾಂತ್ರಿಕರ ಚಲನವಲನ ಮೇಲಿನ ನಿರ್ಬಂಧ ಸಡಿಲ

ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಗೆ ನಿಯೋಜಿಸಲ್ಪಟ್ಟಿರುವ ಇರಾನ್ ರಾಜತಾಂತ್ರಿಕರ ಚಲನವಲನಗಳ ಮೇಲೆ ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ ವಿಧಿಸಿದ್ದ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಿರುವುದಾಗಿ ಅಮೆರಿಕ ಗುರುವಾರ ಹೇಳಿದೆ.

ವಿಶ್ವಸಂಸ್ಥೆಯ ಸುತ್ತಲಿನ ಕೆಲವೇ ಬ್ಲಾಕ್‌ಗಳನ್ನು ಹೊರತುಪಡಿಸಿ ಇತರ ಸ್ಥಳಗಳಿಗೆ ಇರಾನ್ ರಾಜತಾಂತ್ರಿಕರು ಹೋಗಬಾರದು ಎಂಬ ನಿರ್ಬಂಧವನ್ನು ಟ್ರಂಪ್ ಸರಕಾರ 2019ರಲ್ಲಿ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News