ವಿಮಾನದಲ್ಲಿ ಇಂಜಿನ್ ವೈಫಲ್ಯ, ಬೆಂಕಿ: 241 ಪ್ರಯಾಣಿಕರನ್ನು ಸಾಹಸಿಕವಾಗಿ ರಕ್ಷಿಸಿದ ಪೈಲಟ್

Update: 2021-02-22 14:46 GMT
photo: twitter(@CBSDenve9r)

 ಡೆನ್ವರ್ (ಅಮೆರಿಕ), ಫೆ. 22: ಅಮೆರಿಕದ ಡೆನ್ವರ್‌ನಿಂದ ಹವಾಯಿಗೆ ಹಾರುತ್ತಿದ್ದ ವಿಮಾನವೊಂದರಲ್ಲಿ ಇಂಜಿನ್ ವೈಫಲ್ಯ ಸಂಭವಿಸಿದ್ದು, ಪ್ರಯಾಣಿಕರು ಭಯಾನಕ ಅನುಭವಕ್ಕೆ ಒಳಗಾದರು. ಅದೃಷ್ಟವಶಾತ್ ವಿಮಾನ ಬಳಿಕ ಸುರಕ್ಷಿತವಾಗಿ ಭೂಸ್ಪರ್ಶ ನಡೆಸಿತು ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ವಿಮಾನದ ದೊಡ್ಡ ದೊಡ್ಡ ಅವಶೇಷಗಳು ಜನವಾಸದ ಸ್ಥಳಗಳ ಮೇಲೆ ಬಿದ್ದವು.

ಬೋಯಿಂಗ್ 777-200 ವಿಮಾನದ ಬಲಭಾಗದ ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಹಾಗೂ ಅದರ ರೆಕ್ಕೆಯು ಅಲ್ಲಾಡುತ್ತಿರುವುದನ್ನು ವಿಮಾನದ ಒಳಭಾಗದಿಂದ ಚಿತ್ರೀಕರಿಸಲಾದ ವೀಡಿಯೊವೊಂದು ತೋರಿಸಿದೆ. ಇಂಜಿನ್‌ನ ಹೊದಿಕೆಯು ನಾಪತ್ತೆಯಾಗಿತ್ತು.

ಯುನೈಟೆಡ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ 231 ಪ್ರಯಾಣಿಕರು ಮತ್ತು 10 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದವರಿಗಾಗಲಿ, ನೆಲದ ಮೇಲಿದ್ದವರಿಗಾಗಲಿ ಗಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ವಿಮಾನದ ಪೈಲಟ್ ತುರ್ತು ಸಂದೇಶ ಕಳುಹಿಸಿ, ಡೆನ್ವರ್‌ಗೆ ಮರಳಲು ತುರ್ತು ಅನುಮೋದನೆ ಕೋರಿದರು. ಬಳಿಕ ವಿಮಾನವು ಡೆನ್ವರ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ಇಂತಹಾ ಕ್ಲಿಷ್ಟಕರ ಸನ್ನಿವೇಶದಲ್ಲೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಿದ ಪೈಲಟ್‌ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿಮಾನ ಹಾರಾಟ ಸ್ಥಗಿತಗೊಳಿಸಲು ಬೋಯಿಂಗ್ ಶಿಫಾರಸು

ವಾರಾಂತ್ಯದಲ್ಲಿ ಡೆನ್ವರ್‌ನ ಆಕಾಶದಿಂದ ಅವಶೇಷಗಳನ್ನು ಉದುರಿಸಿದಂಥ ಇಂಜಿನ್‌ಗಳನ್ನೇ ಹೊಂದಿರುವ 777 ಮಾದರಿಯ ವಿಮಾನಗಳನ್ನು ಬಳಸದಿರುವಂತೆ ಬೋಯಿಂಗ್ ಕಂಪೆನಿ ಸೋಮವಾರ ಶಿಫಾರಸು ಮಾಡಿದೆ.

ಇಂಥ ವಿಮಾನಗಳನ್ನು ಹೆಚ್ಚುವರಿ ತಪಾಸಣೆಗೆ ಒಳಪಡಿಸಲು ಅಮೆರಿಕದ ಅಧಿಕಾರಿಗಳು ನೀಡಿರುವ ಸೂಚನೆ ಹಾಗೂ ಈ ಮಾದರಿಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲು ಜಪಾನ್ ಕ್ರಮಗಳನ್ನು ತೆಗೆದುಕೊಂಡ ಬಳಿಕ ಬೋಯಿಂಗ್ ಈ ಹೇಳಿಕೆ ನೀಡಿದೆ.

  ಪ್ರಸಕ್ತ ಈ ಮಾದರಿಯ 69 ವಿಮಾನಗಳು ಸೇವೆಯಲ್ಲಿವೆ ಹಾಗೂ 59 ವಿಮಾನಗಳು ಬಳಕೆಯಲ್ಲಿಲ್ಲ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ವಿಮಾನ ಪ್ರಯಾಣಕ್ಕೆ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಹಲವು ವಿಮಾನಗಳನ್ನು ಉಗ್ರಾಣಗಳಲ್ಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News