ತನ್ನ ಏರ್‌ಫೋರ್ಸ್ ವನ್‌ ವಿಮಾನದಲ್ಲಿ ಪ್ರಯಾಣಿಸಲು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರನ್ನು ಆಹ್ವಾನಿಸಿದ್ದ ಟ್ರಂಪ್

Update: 2021-02-22 14:55 GMT

 ಸಿಯೋಲ್ (ದಕ್ಷಿಣ ಕೊರಿಯ), ಫೆ. 22: ಎರಡು ವರ್ಷಗಳ ಹಿಂದೆ ವಿಯೆಟ್ನಾಮ್‌ನ ಹನೋಯಿ ನಗರದಲ್ಲಿ ಶೃಂಗಸಭೆ ನಡೆದ ಬಳಿಕ, ಅಂದಿನ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಏರ್‌ಫೋರ್ಸ್ ವನ್ ವಿಮಾನದಲ್ಲಿ ಪ್ರಯಾಣಿಸಲು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ರನ್ನು ಆಹ್ವಾನಿಸಿದ್ದರು ಎಂದು ಬಿಬಿಸಿಯ ಸಾಕ್ಷಚಿತ್ರವೊಂದು ಹೇಳಿದೆ.

ಟ್ರಂಪ್ ಅಧಿಕಾರಕ್ಕೆ ಬಂದ ಆರಂಭದಲ್ಲಿ, ಅವರು ಮತ್ತು ಕಿಮ್ ಜಾಂಗ್ ಉನ್ ಪರಸ್ಪರರನ್ನು ದೂಷಿಸಿದ್ದರು. ಬಳಿಕ ಇಬ್ಬರ ನಡುವಿನ ಸಂಬಂಧ ಸುಧಾರಿಸಿದ್ದು, ಎರಡು ಶೃಂಗಸಭೆಗಳನ್ನು ನಡೆಸಿದ್ದರು. ಶೃಂಗ ಸಮ್ಮೇಳನದ ವೇಳೆ ಇಬ್ಬರೂ ನಾಯಕರು ಪರಸ್ಪರರನ್ನು ಪ್ರಶಂಸಿಸಿದ್ದರು.

ಆದರೆ, ಶೃಂಗಸಭೆಗಳಿಂದ ಹೆಚ್ಚಿನ ಪ್ರಗತಿ ಸಾಧ್ಯವಾಗಲಿಲ್ಲ. ಅವರ ನಡುವೆ ಹನೋಯಿಯಲ್ಲಿ ನಡೆದ ಎರಡನೇ ಶೃಂಗ ಸಮ್ಮೇಳನ ಅರ್ಧದಲ್ಲೇ ಕೊನೆಗೊಂಡಿತು ಹಾಗೂ ಬಳಿಕ ಅವರ ನಡುವೆ ಯಾವುದೇ ಸಂಪರ್ಕ ಏರ್ಪಡಲಿಲ್ಲ.

ವಿಯೆಟ್ನಾಮ್‌ನಲ್ಲಿ 2019ರಲ್ಲಿ ನಡೆದ ಶೃಂಗ ಸಮ್ಮೇಳನದ ಬಳಿಕ, ತನ್ನ ಏರ್‌ಫೋರ್ಸ್ ವನ್ ವಿಮಾನದಲ್ಲಿ ಕಿಮ್ ಜಾಂಗ್‌ರನ್ನು ಅವರ ಮನೆಗೆ ತಲುಪಿಸುವ ಕೊಡುಗೆಯನ್ನು ಟ್ರಂಪ್ ನೀಡಿದರು ಎಂದು ಬಿಬಿಸಿ ಸಾಕ್ಷಚಿತ್ರ ‘ಟ್ರಂಪ್ ಟೇಕ್ಸ್ ಆನ್ ದ ವರ್ಲ್ಡ್’ ಹೇಳಿದೆ. ಈ ಮೂಲಕ ಅತ್ಯಂತ ಅನುಭವಿ ರಾಜತಾಂತ್ರಿಕರನ್ನೂ ಟ್ರಂಪ್ ದಂಗಾಗಿಸಿದರು ಎಂದು ಅದು ಹೇಳಿದೆ.

 ಈ ಕೊಡುಗೆಯನ್ನು ಕಿಮ್ ಜಾಂಗ್ ಉನ್ ಸ್ವೀಕರಿಸಿದ್ದರೆ, ಟ್ರಂಪ್‌ರ ವಿಮಾನವು ಕಿಮ್ ಹಾಗೂ ಅವರ ಕೆಲವು ಸಂಗಡಿಗರನ್ನು ಹೊತ್ತು ಉತ್ತರ ಕೊರಿಯದ ವಾಯುಪ್ರದೇಶವನ್ನು ಪ್ರವೇಶಿಸುತ್ತಿತ್ತು ಹಾಗೂ ಹಲವಾರು ಗಂಭೀರ ಭದ್ರತಾ ಕಳವಳಗಳಿಗೆ ಕಾರಣವಾಗುತ್ತಿತ್ತು ಎಂದು ಟ್ರಂಪ್‌ರ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದ ಏಶ್ಯ ಪರಿಣತ ಮ್ಯಾಥ್ಯೂ ಪಾಟಿಂಗರ್ ಹೇಳಿದ್ದಾರೆ.

ಆದರೆ, ಈ ಕೊಡುಗೆಯನ್ನು ಕಿಮ್ ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News