ಮ್ಯಾನ್ಮಾರ್: ‘ಅಮಾನುಷ ಬಲಪ್ರಯೋಗ’ವನ್ನು ಖಂಡಿಸಿದ ಗುಟೆರಸ್ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ

Update: 2021-02-22 15:19 GMT

  ಜಿನೀವ (ಸ್ವಿಟ್ಸರ್‌ಲ್ಯಾಂಡ್), ಫೆ. 22: ಮ್ಯಾನ್ಮಾರ್ ಕ್ಷಿಪ್ರಕ್ರಾಂತಿಯ ಹಿಂದಿರುವವರು ಮಾಡುತ್ತ್ಟಿರುವ ‘ಅಮಾನುಷ ಬಲಪ್ರಯೋಗ’ವನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಸೋಮವಾರ ಖಂಡಿಸಿದ್ದಾರೆ ಹಾಗೂ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಿ ಕೈದಿಗಳನ್ನು ಬಿಡುಗಡೆ ಮಡುವಂತೆ ಸೇನೆಯನ್ನು ಒತ್ತಾಯಿಸಿದ್ದಾರೆ.

‘‘ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸುವಂತೆ ನಾನು ಮ್ಯಾನ್ಮಾರ್ ಸೇನೆಗೆ ಇಂದು ಕರೆ ನೀಡುತ್ತಿದ್ದೇನೆ’’ ಎಂದು ಜಿನೀವದಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ 46ನೇ ಅಧಿವೇಶನವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು. ಅವರ ಪೂರ್ವ ಮುದ್ರಿತ ಭಾಷಣದ ವೀಡಿಯೊವನ್ನು ಸಮ್ಮೇಳನದಲ್ಲಿ ಹಾಕಲಾಯಿತು.

 ‘‘ಕೈದಿಗಳನ್ನು ಬಿಡುಗಡೆಗೊಳಿಸಿ. ಹಿಂಸೆಯನ್ನು ನಿಲ್ಲಿಸಿ. ಮಾನವಹಕ್ಕುಗಳನ್ನು ಹಾಗೂ ಇತ್ತೀಚಿನ ಚುನಾವಣೆಯಲ್ಲಿ ವ್ಯಕ್ತಗೊಂಡ ಜನಾಭಿಪ್ರಾಯವನ್ನು ಗೌರವಿಸಿ’’ ಎಂದು ಅವರು ಹೇಳಿದರು. ‘‘ನಮ್ಮ ಆಧುನಿಕ ಜಗತ್ತಿನಲ್ಲಿ ಸೇನಾ ಕ್ಷಿಪ್ರಕ್ರಾಂತಿಗಳಿಗೆ ಜಾಗವಿಲ್ಲ’’ ಎಂದರು.

ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯ ಮೂಲಕ ಸೇನೆಯು ಮ್ಯಾನ್ಮಾರ್‌ನ ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ ಮೊದಲ ಬಾರಿಗೆ ಶನಿವಾರ ದೇಶದಲ್ಲಿ ಭೀಕರ ಹಿಂಸಾಚಾರ ನಡೆದಿದೆ. ಮಾಂಡಲೆ ನಗರದಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ಮೃತಪಟ್ಟಿದ್ದಾರೆ. ಯಾಂಗನ್‌ನಲ್ಲಿ ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಮೂರನೇ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News