ಆಸ್ಟ್ರೇಲಿಯಕ್ಕೆ ಸುದ್ದಿ ನಿಷೇಧ ತೆರವುಗೊಳಿಸಿದ ಫೇಸ್‌ಬುಕ್: ಮಾಧ್ಯಮ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಒಪ್ಪಿಗೆ

Update: 2021-02-23 17:12 GMT

ಸಿಡ್ನಿ (ಆಸ್ಟ್ರೇಲಿಯ), ಫೆ. 23: ಆಸ್ಟ್ರೇಲಿಯದಲ್ಲಿ ಸುದ್ದಿ ಪ್ರಸಾರದ ಮೇಲೆ ತಾನು ವಿಧಿಸಿರುವ ವಿವಾದಾಸ್ಪದ ನಿಷೇಧವನ್ನು ತೆರವುಗೊಳಿಸುವುದಾಗಿ ಹಾಗೂ ಸ್ಥಳೀಯ ಮಾಧ್ಯಮ ಕಂಪೆನಿಗಳಿಗೆ ಅವುಗಳ ಸುದ್ದಿಗಳಿಗಾಗಿ ಹಣ ನೀಡುವುದಾಗಿ ಫೇಸ್‌ಬುಕ್ ಮಂಗಳವಾರ ಹೇಳಿದೆ.

 ಗೂಗಲ್ ಮತ್ತು ಫೇಸ್‌ಬುಕ್ ಮುಂತಾದ ಬೃಹತ್ ಜಾಗತಿಕ ತಂತ್ರಜ್ಞಾನ ಕಂಪೆನಿಗಳು ತಮ್ಮ ಮಾಧ್ಯಮಗಳ ಮೂಲಕ ಪ್ರಸಾರವಾಗುವ ಸುದ್ದಿಗಳಿಗೆ ಸಂಬಂಧಿತ ಮಾಧ್ಯಮ ಕಂಪೆನಿಗಳಿಗೆ ಹಣ ಪಾವತಿಸಬೇಕು ಎಂಬ ಕಾನೂನಿಗೆ ಸಂಸತ್‌ನ ಅನುಮೋದನೆ ಲಭಿಸುವ ಮುನ್ನ ಆಸ್ಟ್ರೇಲಿಯ ಸರಕಾರ ಮತ್ತು ಫೇಸ್‌ಬುಕ್ ನಡುವೆ ನಡೆದ ಕೊನೆಯ ಹಂತದ ರಾಜಿ ಮಾತುಕತೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ಆಸ್ಟ್ರೇಲಿಯದ ಸ್ಥಳೀಯ ಸುದ್ದಿ ಮಾಧ್ಯಮಗಳಿಗೆ ಹಣ ಪಾವತಿಸಲು ಗೂಗಲ್ ಮತ್ತು ಫೇಸ್‌ಬುಕ್ ಒಪ್ಪಿವೆ ಎಂಬುದಾಗಿ ಆಸ್ಟ್ರೇಲಿಯದ ಹಣಕಾಸು ಸಚಿವ ಜೋಶ್ ಫ್ರೈಡನ್‌ಬರ್ಗ್ ಕೂಡ ಘೋಷಿಸಿದರು.

ಒಪ್ಪಂದದ ಅಂಶಗಳ ಪ್ರಕಾರ, ಸದ್ಯಕ್ಕೆ ಆಸ್ಟ್ರೇಲಿಯದ ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸಬೇಕೆಂದು ತಂತ್ರಜ್ಞಾನ ಕಂಪೆನಿಗಳನ್ನು ಬಲವಂತಪಡಿಸಲಾಗುವುದಿಲ್ಲ.

ಸುದ್ದಿಗಳಿಗೆ ಹಣ ಪಾವತಿಸುವುದು ದುಬಾರಿಯಾಗುತ್ತದೆ ಹಾಗೂ ಅದು ಇಡೀ ಜಗತ್ತಿಗೆ ಪೂರ್ವನಿದರ್ಶನವಾಗಬಹುದು ಎಂಬ ಭೀತಿಯನ್ನು ಈ ಕಂಪೆನಿಗಳು ಹೊಂದಿವೆ.

ರಾಜಿ ಒಪ್ಪಂದ ಏರ್ಪಟ್ಟ ಗಂಟೆಗಳ ಬಳಿಕ, ಆಸ್ಟ್ರೇಲಿಯ ಮಾಧ್ಯಮ ಕಂಪೆನಿ ‘ಸೆವೆನ್ ವೆಸ್ಟ್’ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಫೇಸ್‌ಬುಕ್ ತಿಳಿಸಿದೆ. ಇತರ ಸ್ಥಳೀಯ ಸುದ್ದಿ ಮಾಧ್ಯಮಗಳ ಜೊತೆಗೂ ವಾಣಿಜ್ಯ ವ್ಯವಹಾರ ಏರ್ಪಡಿಸಿಕೊಳ್ಳಲು ಅದು ಮುಂದಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News