ಸಿಂಗಾಪುರ: ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಕೊಂದ ಭಾರತೀಯ ಮಹಿಳೆ

Update: 2021-02-24 04:00 GMT

ಸಿಂಗಾಪುರ : ಭಾರತೀಯ ಮೂಲದ ಮಹಿಳೆಯೊಬ್ಬರು ಮ್ಯಾನ್ಮಾರ್ ಮೂಲದ ಮನೆ ಕೆಲಸದಾಕೆಯನ್ನು ಚಿತ್ರಹಿಂಸೆ ನೀಡಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.

ಭಾರತೀಯ ಮೂಲದ ಗಾಯತ್ರಿ ಮುರುಗಯನ್ ಎಂಬ ಮಹಿಳೆ 24 ವರ್ಷ ವಯಸ್ಸಿನ ಮನೆಕೆಲಸದಾಕೆಗೆ ನಿಂದಿಸಿ, ಉಪವಾಸ ಹಾಕಿ, ಚಿತ್ರಹಿಂಸೆ ನೀಡಿ ಪ್ರತಿಯೊಬ್ಬರ ಆತ್ಮಸಾಕ್ಷಿಗೆ ಆಘಾತ ತರುವ ರೀತಿಯಲ್ಲಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಅಭಿಯೋಜನೆ ನ್ಯಾಯಾಲಯದಲ್ಲಿ ವಾದಿಸಿದೆ. ಮಹಿಳೆ ಕೂಡಾ ತಪ್ಪೊಪ್ಪಿಕೊಂಡಿದ್ದಾಳೆ.

ಮನೆಕೆಲಸಕ್ಕೆ ನಿಯೋಜಿಸಿಕೊಂಡ ಐದು ತಿಂಗಳಲ್ಲೇ ಆಕೆಯನ್ನು ಗುದ್ದುವುದು, ತುಳಿಯುವುದು ಹಾಗೂ ಉಪವಾಸ ಹಾಕಿ ಆಕೆಯ ದೇಹತೂಕ 24 ಕೆಜಿಗೆ ಇಳಿಯುವಷ್ಟರ ಮಟ್ಟಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ನ್ಯೂಸ್ ಏಷ್ಯಾ ಚಾನಲ್ ವರದಿ ಮಾಡಿದೆ.

ಪಿಯಾಂಗ್ ನಾ ಡಾನ್ ಎಂಬ ಕೆಲಸದಾಕೆ ಸಾಯುವ ಮುನ್ನಾ ದಿನ ಮೆದುಳಿಗೆ ಹಾಗೂ ಕುತ್ತಿಗೆಗೆ ತೀವ್ರತರದ ಗಾಯವಾಗಿತ್ತು. ಆಕೆಯನ್ನು ಉಪವಾಸ ಹಾಕಿದ್ದಲ್ಲದೇ ಕಿಟಕಿ ಗ್ರಿಲ್‌ಗೆ ರಾತ್ರಿಯ ವೇಳೆ ಕಟ್ಟಿಹಾಕಿ ಹಲ್ಲೆ ಮಾಡಲಾಗಿತ್ತು. ಕಸದ ಬುಟ್ಟಿಯಿಂದ ಆಕೆ ಆಹಾರ ಹೆಕ್ಕಿ ತಿನ್ನುವಂತೆ ಮಾಡಲಾಗಿತ್ತು ಎಂದು ವರದಿ ಹೇಳಿದೆ.

ಗಾಯತ್ರಿಗೆ ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 28 ಆರೋಪಗಳ ಬಗ್ಗೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಇತರ 87 ಆರೋಪಗಳನ್ನು ಶಿಕ್ಷೆಗೆ ಪರಿಗಣಿಸಲಾಗಿದೆ. ಕಡುಬಡತನದಿಂದ ಬಳಲುತ್ತಿದ್ದ ಸಂತ್ರಸ್ತ ಮಹಿಳೆ ಮೂರು ವರ್ಷದ ಮಗನನ್ನು ಬೆಳೆಸುವ ಸಲುವಾಗಿ ಮ್ಯಾನ್ಮಾರ್‌ನಿಂದ ಸಿಂಗಾಪುರಕ್ಕೆ ಬಂದು ಗಾಯತ್ರಿ ಬಳಿ ಕೆಲಸಕ್ಕೆ ಸೇರಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News