ಅಕ್ಷರ್ ಪಟೇಲ್,ಅಶ್ವಿನ್ ಸ್ಪಿನ್ ಮೋಡಿಗೆ ಮತ್ತೊಮ್ಮೆ ಬೆದರಿದ ಇಂಗ್ಲೆಂಡ್ 81ಕ್ಕೆ ಆಲೌಟ್
ಅಹಮದಾಬಾದ್: ಭಾರತದ ಸ್ಪಿನ್ ದ್ವಯರಾದ ಅಕ್ಷರ್ ಪಟೇಲ್ ಹಾಗೂ ಆರ್. ಅಶ್ವಿನ್ ಸ್ಪಿನ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಕೇವಲ 81 ರನ್ ಗೆ ಗಂಟುಮೂಟೆ ಕಟ್ಟಿದೆ. ಭಾರತ ಮೂರನೇ ಟೆಸ್ಟ್ ಪಂದ್ಯದ ಗೆಲುವಿಗೆ ಕೇವಲ 49 ರನ್ ಗುರಿ ಪಡೆದಿದೆ.
ಭಾರತವನ್ನು ಮೊದಲ ಇನಿಂಗ್ಸ್ ನಲ್ಲಿ 145 ರನ್ ಗೆ ನಿಯಂತ್ರಿಸಿ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಸ್ಥಿತಿ ಅದೇ ರಾಗ, ಅದೇ ಹಾಡು ಎಂಬಂತಾಗಿತ್ತು. ಎರಡನೇ ಇನಿಂಗ್ಸ್ ನಲ್ಲೂ ಅಕ್ಷರ್ (5-32) ಹಾಗೂ ಅಶ್ವಿನ್ (4-48)ದಾಳಿಗೆ ತರಗಲೆಯಂತೆ ಉದುರಿದ ಇಂಗ್ಲೆಂಡ್ ಕ್ರಿಕೆಟಿಗರು 30.4 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡರು.
ಇಂಗ್ಲೆಂಡ್ ನ್ನು ಸತತ ಎರಡನೇ ಬಾರಿ ಕನಿಷ್ಠ ಸ್ಕೋರ್ ಗೆ ಕಟ್ಟಿಹಾಕಿದ ವಿರಾಟ್ ಕೊಹ್ಲಿ ಪಡೆ 3ನೇ ಪಂದ್ಯದ ಗೆಲುವಿಗೆ 49 ರನ್ ಗುರಿ ಪಡೆದಿದೆ. ಇಂಗ್ಗೆಂಡ್ ಪರ 2ನೇ ಇನಿಂಗ್ಸ್ ನಲ್ಲಿ ಬೆನ್ ಸ್ಟೋಕ್ಸ್ (25)ಸರ್ವಾಧಿಕ ಸ್ಕೋರ್ ಗಳಿಸಿದರು. ನಾಯಕ ಜೋ ರೂಟ್ 19 ಹಾಗೂ ವಲ್ಲಿ ಪೋಪ್ 12 ರನ್ ಗಳಿಸಿದರು. ಆರಂಭಿಕ ಬ್ಯಾಟ್ಸ್ ಮನ್ ಝಾಕ್ ಕ್ರಾವ್ಲೆ , ಜಾನಿ ಬೈರ್ ಸ್ಟೋವ್, ಆರ್ಚರ್ ಹಾಗೂ ಆ್ಯಂಡರ್ಸನ್ ಶೂನ್ಯ ಸಂಪಾದಿಸಿದರು.