ಮೂರನೇ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ, ಸರಣಿಯಲ್ಲಿ 2-1 ಮುನ್ನಡೆ

Update: 2021-02-25 17:00 GMT

ಅಹಮದಾಬಾದ್: ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ (ಔಟಾಗದೆ 25) ಹಾಗೂ ಶುಭಮನ್ ಗಿಲ್ (ಔಟಾಗದೆ 15)ಸಾಹಸದಿಂದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು 10 ವಿಕೆಟ್‍ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

   ಗುರುವಾರ 3ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲೇ ಭರ್ಜರಿ ಗೆಲುವು ಸಾಧಿಸಿರುವ ಭಾರತ ತಂಡ  ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಡುವ ಅವಕಾಶಕ್ಕೆ ಮತ್ತಷ್ಟು ನಿಕಟವಾಗಿದೆ. ಇದೀಗ ಇಂಗ್ಲೆಂಡ್ ಚಾಂಪಿಯನ್ ಶಿಪ್ ಫೈನಲ್ ಸ್ಪರ್ಧೆಯಿಂದ ಹೊರ ನಡೆದಿದೆ.

ಗುರುವಾರ ಒಂದೇ ದಿನ ಒಟ್ಟು 17 ವಿಕೆಟ್ ಗಳು ಪತನಗೊಂಡಿದ್ದು, ಇದು ಪಂದ್ಯದಲ್ಲಿ  ಬೌಲರ್ ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಿತ್ತು.

ಮೊದಲ ಟೆಸ್ಟ್  ಪಂದ್ಯದಲ್ಲಿ 227 ರನ್ ನಿಂದ ಸೋತ ಬಳಿಕ ಭಾರತ 2ನೇ ಟೆಸ್ಟ್ ಪಂದ್ಯವನ್ನು 317 ರನ್ ಹಾಗೂ 3ನೇ  ಪಂದ್ಯವನ್ನು ಎರಡೇ ದಿನದಲ್ಲಿ ಜಯಿಸಿ ಸರಣಿಯಲ್ಲಿ ತಿರುಗೇಟು ನೀಡಿದೆ.  ಮೊಟೆರಾದ  ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಇಂಗ್ಲೆಂಡ್ ತಂಡ ಜಾಕ್ ಲೀಚ್ ಹಾಗೂ ಜೋ ರೂಟ್ ರನ್ನು ಬಳಸಿಕೊಂಡರೆ ಭಾರತವು ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ರನ್ನು ಚೆನ್ನಾಗಿ ಬಳಸಿಕೊಂಡು ಆಂಗ್ಲರ ಮೇಲೆ ಸವಾರಿ ಮಾಡಿತು. ಈ ಇಬ್ಬರು ಬೌಲರ್ ಗಳು ಉತ್ತಮ ಬೌಲಿಂಗ್ ಮೂಲಕ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದರು.

ಗೆಲ್ಲಲು 49 ರನ್ ಸುಲಭ ಸವಾಲು ಪಡೆದಿದ್ದ ಭಾರತವು 7.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್‍ ಗಳಿಸಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 2ನೇ ಇನಿಂಗ್ಸ್ ನಲ್ಲಿ ಕೇವಲ 81 ರನ್ ಗಳಿಸಿತು. ವಿರಾಟ್ ಕೊಹ್ಲಿ ಪಡೆಗೆ 3ನೇ ಟೆಸ್ಟ್ ಗೆಲುವಿಗೆ ಸುಲಭ ಗುರಿ ನೀಡಿತು.

ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಅಹ್ಮದಾಬಾದ್ ನಲ್ಲೇ ಮಾರ್ಚ್ 4ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News