ಉಗ್ರ ದಾಳಿಯನ್ನು ತಡೆಯಲು ಮುನ್ನೆಚ್ಚರಿಕಾ ದಾಳಿ ನಡೆಸುವ ಹಕ್ಕಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಪ್ರತಿಪಾದನೆ

Update: 2021-02-25 17:52 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಫೆ. 25: ಮೂರನೇ ದೇಶವೊಂದರಲ್ಲಿ ಕಾರ್ಯಾಚರಿಸುತ್ತಿರುವ, ಸರಕಾರವನ್ನು ಪ್ರತಿನಿಧಿಸದ ಗುಂಪುಗಳಿಂದ ಸಂಭಾವ್ಯ ಸಶಸ್ತ್ರ ದಾಳಿಯ ಭೀತಿಯಿರುವಾಗ, ಮುನ್ನೆಚ್ಚರಿಕಾ ದಾಳಿಯನ್ನು ನಡೆಸುವ ಅನಿವಾರ್ಯತೆಗೆ ದೇಶಗಳು ಒಳಗಾಗುತ್ತವೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.

ಪುಲ್ವಾಮ ದಾಳಿ ಸೇರಿದಂತೆ ಭಾರತದ ವಿರುದ್ಧ ಗಡಿಯಾಚೆಯಿಂದ ನಡೆದ ಹಲವು ಭಯೋತ್ಪಾದಕ ದಾಳಿಗಳನ್ನು ಭಾರತ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಭಯೋತ್ಪಾದಕ ಗುಂಪುಗಳಂಥ ಸರಕಾರವನ್ನು ಪ್ರತಿನಿಧಿಸದ ಗುಂಪುಗಳು ಅವುಗಳ ಆತಿಥೇಯ ದೇಶಗಳ ವ್ಯಾಪ್ತಿಯಲ್ಲಿ ಬರುವ ದುರ್ಗಮ ಸ್ಥಳಗಳಿಂದ ಬೇರೆ ದೇಶಗಳ ಮೇಲೆ ದಾಳಿ ನಡೆಸುತ್ತವೆ. ಈ ಮೂಲಕ ಅವುಗಳು ತಮ್ಮ ಆತಿಥೇಯ ದೇಶದ ಸಾರ್ವಭೌಮತೆಯನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತವೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ರಾಯಭಾರಿ ಕೆ. ನಾಗರಾಜ ನಾಯ್ಡು ಹೇಳಿದರು.

ಅವರು ವಿಶ್ವಸಂಸ್ಥೆಯಲ್ಲಿ ಮೆಕ್ಸಿಕೊ ಏರ್ಪಡಿಸಿದ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು.

ಸರಕಾರವನ್ನು ಪ್ರತಿನಿಧಿಸದ ಗುಂಪೊಂದು ದೇಶವೊಂದರ ಮೇಲೆ ಇನ್ನೊಂದು ದೇಶದ ಭೂಭಾಗದಿಂದ ಪದೇ ಪದೇ ಸಶಸ್ತ್ರ ದಾಳಿಗಳನ್ನು ನಡೆಸುತ್ತಿದ್ದರೆ ಹಾಗೂ ಇದರಿಂದ ಸೃಷ್ಟಿಯಾದ ಬೆದರಿಕೆಯನ್ನು ಪರಿಹರಿಸುವ ಗೋಜಿಗೆ ಆತಿಥೇಯ ದೇಶ ಹೋಗದಿದ್ದರೆ ಹಾಗೂ ಆ ಗುಂಪುಗಳು ನಡೆಸುವ ದಾಳಿಯನ್ನು ಬೆಂಬಲಿಸುತ್ತಿದ್ದರೆ ಹಾಗೂ ಅದರ ಪ್ರಾಯೋಜಕತ್ವ ವಹಿಸಿದರೆ, ಹಾನಿಗೊಳಗಾದ ದೇಶವು ಆತ್ಮರಕ್ಷಣೆಗಾಗಿ ಆ ಗುಂಪಿನ ವಿರುದ್ಧ ಬಲ ಪ್ರಯೋಗಿಸಬಹುದು ಎಂಬುದಾಗಿ ಹಲವು ದೇಶಗಳು ಭಾವಿಸಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News